Nothing Special   »   [go: up one dir, main page]

Tuesday, March 31, 2015

ಮಲ್ಲಯುದ್ಧ ಕುಸ್ತಿ ಸ್ಪರ್ಧೆಯ ವಿಜೇತರಿಗೆ ಶ್ರೀ ಸಾಯಿಬಾಬಾ ಸಂಸ್ಥಾನದ ವತಿಯಿಂದ ಸನ್ಮಾನ - ಕೃಪೆ:ಸಾಯಿಅಮೃತಧಾರಾ. ಕಾಂ

ಶ್ರೀ ರಾಮನವಮಿ ಉತ್ಸವದ ಶುಭ ಸಂದರ್ಭದಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನವು ಸ್ಥಳೀಯ ಗ್ರಾಮಸ್ಥರ ಸಹಕಾರದೊಂದಿಗೆ ನಗರ ಹಾಗೂ ಗ್ರಾಮೀಣ ಪ್ರದೇಶದ ಜನರಿಗಾಗಿ ಮಲ್ಲಯುದ್ಧ ಕುಸ್ತಿಯ ಸ್ಪರ್ಧೆಯನ್ನು ಆಯೋಜಿಸಿತ್ತು.  ಈ ಸ್ಪರ್ಧೆಯಲ್ಲಿ ದೊಹಾಳೆಯ ಶ್ರೀ.ಮಚ್ಚೀಂದ್ರ  ಜಪೆ ಹಾಗೂ ಕೋಕಮಟಾನ್ ನ ಶ್ರೀ.ವಿಲಾಸ್ ದೋಹಿಪಡೆಯವರುಗಳು ಕ್ರಮವಾಗಿ ಗ್ರಾಮೀಣ ಹಾಗೂ ನಗರ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದರು. ಸ್ಪರ್ಧೆಯ ವಿಜೇತರನ್ನು ಮಲ್ಲಯುದ್ಧ ಕುಸ್ತಿ ಸಮಿತಿಯ ಅಧ್ಯಕ್ಷರಾದ ಶ್ರೀ.ಮುಕುಂದ್ ರಾವ್ ಕೋತೆಯವರು ಸನ್ಮಾನಿಸಿದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ 

Saturday, March 28, 2015

ಕೇಂದ್ರ ಪಂಚಾಯತ್ ರಾಜ್ ಖಾತೆ ರಾಜ್ಯ ಸಚಿವ ಶ್ರೀ.ನಿಹಾಲ್ ಚಂದ್ ಮೇಘವಾಲ್ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ. ಕಾಂ

ಕೇಂದ್ರ ಪಂಚಾಯತ್ ರಾಜ್ ಖಾತೆ ರಾಜ್ಯ ಸಚಿವರಾದ  ಶ್ರೀ.ನಿಹಾಲ್ ಚಂದ್ ಮೇಘವಾಲ್ ರವರು ಇದೇ ತಿಂಗಳ 28ನೇ ಮಾರ್ಚ್ 2015, ಶನಿವಾರ ದಂದು ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. 


ಕನ್ನಡ ಅನುವಾದ; ಶ್ರೀಕಂಠ ಶರ್ಮ 

ಶ್ರೀ ಸಾಯಿಬಾಬಾ ಸಂಸ್ಥಾನದ ವತಿಯಿಂದ ಶ್ರೀ ರಾಮನವಮಿ ಉತ್ಸವದ ಆಚರಣೆ - ಒಂದು ವರದಿ - ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀ ಸಾಯಿಬಾಬಾ  ಸಂಸ್ಥಾನದ ವತಿಯಿಂದ ಆಯೋಜಿಸಲಾಗಿರುವ ಶ್ರೀ ರಾಮನವಮಿ ಉತ್ಸವವು ಇದೇ ತಿಂಗಳ 27ನೇ ಮಾರ್ಚ್ 2015, ಶುಕ್ರವಾರ ದಂದು ಅತ್ಯಂತ ವಿಜೃಂಭಣೆಯಿಂದ ಪ್ರಾರಂಭವಾಯಿತು. ಉತ್ಸವದ ಸಲುವಾಗಿ ಶಿರಡಿಗೆ ಆಗಮಿಸಿರುವ ಲಕ್ಷಾಂತರ ಸಾಯಿ ಭಕ್ತರ ಸಾಯಿ ನಾಮ ಜಯಕಾರದಿಂದ ಶಿರಡಿ ಪಟ್ಟಣವು ಪ್ರತಿಧ್ವನಿಸುತ್ತಿತ್ತು. ಸ್ವತಃ ಶ್ರೀಸಾಯಿಬಾಬಾರವರೇ ತಮ್ಮ ಅವತರಣ ಕಾಲದಲ್ಲಿ ಪ್ರಾರಂಭಿಸಿದ ಈ ಉತ್ಸವದಲ್ಲಿ ಮಹಾರಾಷ್ಟ್ರ ಹಾಗೂ ದೇಶದ ವಿವಿಧ ಭಾಗಗಳಿಂದ ಸಾಯಿ ಭಕ್ತರು ಪಲ್ಲಕ್ಕಿಗಳನ್ನು ಹೊತ್ತುಕೊಂಡು ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನಕ್ಕಾಗಿ ಆಗಮಿಸಿದ್ದರು. 

ಉತ್ಸವದ ಮೊದಲನೆಯ ದಿನವಾದ 27ನೇ ಮಾರ್ಚ್ 2015, ಶುಕ್ರವಾರ ದಂದು ಬೆಳಗಿನ ಕಾಕಡಾ ಆರತಿಯಾದ ನಂತರ ಶ್ರೀ ಸಾಯಿಬಾಬಾರವರ ಭಾವಚಿತ್ರ, ವಿಗ್ರಹ, ವೀಣೆ ಮತ್ತು ಪವಿತ್ರ ಸಾಯಿ ಸಚ್ಚರಿತ್ರೆಯನ್ನು ಸಮಾಧಿ ಮಂದಿರದಿಂದ ಮೆರವಣಿಗೆಯಲ್ಲಿ ದ್ವಾರಕಾಮಾಯಿಗೆ ಕೊಂಡೊಯ್ಯಲಾಯಿತು. ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ , ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆ ಪೋತಿಯನ್ನು, ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆಯ ಮತ್ತು ಮಂದಿರದ ಮುಖ್ಯಸ್ಥರಾದ ಶ್ರೀ.ನವನಾಥ ಕೋತೆಯವರು ಬಾಬಾರವರ ಭಾವಚಿತ್ರವನ್ನು, ಸಂಸ್ಥಾನದ ಪುರೋಹಿತರಾದ ಶ್ರೀ.ನಾರಾಯಣ ಭಿಸೆ ವೀಣೆಯನ್ನು ಹಿಡಿದುಕೊಂಡು ಈ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. 


ಮೆರವಣಿಗೆಯು ದ್ವಾರಕಾಮಾಯಿಯನ್ನು ತಲಪುತ್ತಿದ್ದಂತೆಯೇ ಶ್ರೀ ಸಾಯಿ ಸಚ್ಚರಿತ್ರೆಯ ಪಾರಾಯಣವನ್ನು ಪ್ರಾರಂಭಿಸಲಾಯಿತು. ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ಮೊದಲನೇ ಅಧ್ಯಾಯವನ್ನು ಹಾಗೂ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆಯವರು ಎರಡನೆಯ ಅಧ್ಯಾಯವನ್ನು ಪಾರಾಯಣ ಮಾಡುವುದರ ಮೂಲಕ ಅಖಂಡ ಪಾರಾಯಣಕ್ಕೆ ವಿಧ್ಯುಕ್ತ ಚಾಲನೆ ನೀಡಿದರು. 


ಇದಕ್ಕೆ ಮೊದಲು ಸಮಾಧಿ ಮಂದಿರದಲ್ಲಿ ಬೆಳಗಿನ ಕಾಕಡಾ ಆರತಿಯ ನಂತರ ಬಾಬಾರವರ ಪಾದ ಪೂಜೆಯನ್ನು ಶ್ರೀ.ರಾಜೇಂದ್ರ ಜಾಧವ್ ಮತ್ತು ಅವರ ಧರ್ಮಪತ್ನಿಯವರು ನೆರವೇರಿಸಿದರು. 


ಎಂದಿನಂತೆ ಈ ವರ್ಷವೂ ಸಹ ಮುಂಬೈನ ಶ್ರೀ ದ್ವಾರಕಾಮಾಯಿ ಮಂಡಳಿಯವರು ಸಂಸ್ಥಾನದ ಆವರಣದಲ್ಲಿ ಸುಂದರವಾದ ಬೃಹತ್ ಮಹಾದ್ವಾರವನ್ನು ನಿರ್ಮಿಸಿದ್ದಷ್ಟೇ ಅಲ್ಲದೆ ಸಮಾಧಿ ಮಂದಿರ ಮತ್ತು ಅದರ ಸುತ್ತಮುತ್ತಲಿನ ಪರಿಸರವನ್ನು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದರು. ಶ್ರೀ ದ್ವಾರಕಾಮಾಯಿ ಮಂಡಳಿಯವರು ನಿರ್ಮಿಸಿದ್ದ ಈ ಸುಂದರ ಮತ್ತು ಅದ್ಭುತ ಮಹಾದ್ವಾರವನ್ನು ನೋಡಲು ಸಾಯಿ ಭಕ್ತರು ತಂಡೋಪತಂಡವಾಗಿ ಆಗಮಿಸಿದ್ದರು. 





ಇಂದು ಶ್ರೀ ರಾಮನವಮಿ ಉತ್ಸವದ ಮೊದಲ ದಿನವಾದ ಕಾರಣ ಶ್ರೀ ಸಾಯಿಸಚ್ಚರಿತ್ರೆಯ ಅಖಂಡ ಪಾರಯಣಕ್ಕಾಗಿ ದ್ವಾರಕಾಮಾಯಿಯನ್ನು ಇಡೀ ರಾತ್ರಿ ತೆರೆದಿಡಲಾಗಿತ್ತು. 

ಸಾಯಿ ನಗರ ಮೈದಾನದಲ್ಲಿ ಇಂದು ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾಯಿ ಭಕ್ತರಿಂದ ಉತ್ತಮ ಪ್ರತಿಕ್ರಿಯೆ ದೊರೆಯಿತು. ಸಿಕಂದರಾಬಾದ್ ನ ಡಾ.ವಿ.ವೈ.ಆಚಾರ್ಯರವರ ಕುಂಭರಾತಿ ನೃತ್ಯ ಮತ್ತು ಬಹದಾರಪುರದ ಹರಿ ಭಕ್ತ ಪರಾಯಣ ಶ್ರೀ ಸಾಯಿನಾಥ ಮಹಾರಾಜ್ ರಹಾನೆಯವರ ಸಾಯಿ ಕಥೆ ಕಾರ್ಯಕ್ರಮಗಳು ಸಾಯಿ ಭಕ್ತರ ಮನಸೂರೆಗೊಂಡವು. 

ಬೃಹತ್ ಸಂಖ್ಯೆಯಲ್ಲಿ ಸಾಯಿ ಭಕ್ತರು ಆಗಮಿಸುವುದನ್ನು ಈ ಮೊದಲೇ ನಿರೀಕ್ಷಿಸಿದ್ದ ಶ್ರೀ ಸಾಯಿಬಾಬಾ ಸಂಸ್ಥಾನವು ಶ್ರೀ ಸಾಯಿಬಾಬಾರವರ ದರ್ಶನಕ್ಕಾಗಿ ಉತ್ತಮ ವ್ಯವಸ್ಥೆಯನ್ನು ಮಾಡಿತ್ತು. ಅಲ್ಲದೇ ಅತ್ಯುತ್ತಮ ಕುಡಿಯುವ ನೀರಿನ ವ್ಯವಸ್ಥೆಯನ್ನು ಸಹ ಮಾಡಿತ್ತು. 

ಭೂಪಾಲ್ ನ ಶ್ರೀ.ಸೂರ್ಯಕಾಂತ್ ಅವಸ್ತಿ, ಎಲ್ಲೂರಿನ ಶ್ರೀಮತಿ.ಅನಂತ ಲಕ್ಷ್ಮಿ, ಭಿವಂಡಿಯ ಶ್ರೀಮತಿ.ಸುಧಾ ಭಾಜಿರಾವ್ ಪಾಟೀಲ್, ಕರ್ನಾಲ್ ನ ಶ್ರೀಮತಿ.ಉಷಾ ರಾಣಿ ಕಮಲ್ ಮತ್ತು ಶ್ರೀಮತಿ.ದೀಪಾ ಸೋಲಂಕಿಯವರುಗಳು ನೀಡಿದ ಉದಾರ ದೇಣಿಗೆಯ ಸಹಾಯದಿಂದ ಶ್ರೀ ಸಾಯಿ ಪ್ರಸಾದಾಲಯದಲ್ಲಿ ಎಲ್ಲಾ ಸಾಯಿ ಭಕ್ತರಿಗೂ ಉಚಿತ ಪ್ರಸಾದ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು.

ಉತ್ಸವದ ಎರಡನೆಯ ದಿನ ಹಾಗೂ ಮುಖ್ಯ ದಿನವಾದ  28ನೇ ಮಾರ್ಚ್ 2015, ಶನಿವಾರ ದಂದು ಶ್ರೀ ಸಾಯಿಬಾಬಾರವರ ಸಮಾಧಿ,ಪಾದುಕೆ ಹಾಗೂ ಅಮೃತಶಿಲೆಯ ವಿಗ್ರಹಕ್ಕೆ ಭಕ್ತರು ಗೋದಾವರಿ  ನದಿಯಿಂದ ಕಾವಡಿಯಲ್ಲಿ ಹೊತ್ತು ತಂದ ಪವಿತ್ರ ನೀರಿನಿಂದ ಅಭಿಷೇಕ ಮಾಡಲಾಯಿತು. ಹೊಸ ಗೋಧಿಯ ಚೀಲಕ್ಕೆ ಪೂಜೆಯನ್ನು ಶ್ರೀ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾದ ಶ್ರೀ.ವಿನಯ್ ಜೋಶಿ ಮತ್ತು ಅವರ ಧರ್ಮಪತ್ನಿ ಶ್ರೀಮತಿ.ರೇವತಿ ಜೋಶಿಯವರುಗಳು ನೆರವೇರಿಸಿದರು. ಅನಾಮಧೇಯ ಸಾಯಿ ಭಕ್ತರು ನೀಡಿದ ದೇಣಿಗೆಯ ಸಹಾಯದಿಂದ ಸಮಾಧಿ ಮಂದಿರದ ಒಳಗಡೆ ಅಳವಡಿಸಲಾದ  ಸುಮಾರು 90 ಲಕ್ಷ ಬೆಲೆಬಾಳುವ ಹವಾ ನಿಯಂತ್ರಣ ಯಂತ್ರವನ್ನು ಶ್ರೀ.ವಿನಯ್ ಜೋಶಿ ಮತ್ತು ಶ್ರೀಮತಿ.ರೇವತಿ ಜೋಶಿಯವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ  ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್, ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ವಿದ್ಯುತ್ ವಿಭಾಗದ ಮುಖ್ಯಸ್ಥರಾದ ಶ್ರೀ.ವಿಜಯ್ ರೋಹಮಾರೆ ಮತ್ತು ಯಂತ್ರ ವಿಭಾಗದ ಮುಖ್ಯಸ್ಥರಾದ ಶ್ರೀ.ಅತುಲ್ ವಾಘ್ ರವರುಗಳು ಕೂಡ ಉಪಸ್ಥಿತರಿದ್ದರು.




ಕಾಕಡಾ ಆರತಿಯಾದ ನಂತರ ದ್ವಾರಕಾಮಾಯಿಯಲ್ಲಿ ಶ್ರೀ ಸಾಯಿ ಸಚ್ಚರಿತೆಯ ಪಾರಾಯಣ ಸುಸಂಪನ್ನವಾಯಿತು. ಪವಿತ್ರ ಶ್ರೀ ಸಾಯಿ ಸಚ್ಚರಿತೆ ಗ್ರಂಥವನ್ನು, ಬಾಬಾರವರ ಭಾವಚಿತ್ರ ಮತ್ತು ವೀಣೆಯೊಂದಿಗೆ ದ್ವಾರಕಾಮಾಯಿಯಿಂದ ಗುರುಸ್ಥಾನದ ಮಾರ್ಗವಾಗಿ ಸಮಾಧಿ ಮಂದಿರಕ್ಕೆ ತರಲಾಯಿತು. ಈ ಮೆರವಣಿಗೆಯಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರೂ ಹಾಗೂ ಜಿಲ್ಲಾ ನ್ಯಾಯಾಧೀಶರೂ ಆದ ಶ್ರೀ.ವಿನಯ್ ಜೋಶಿ ಮತ್ತು ಅವರ ಧರ್ಮಪತ್ನಿ ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆ ಗ್ರಂಥವನ್ನು ಹಿಡಿದುಕೊಂಡಿದ್ದರು. ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ಮತ್ತು ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆಯವರು ಬಾಬಾರವರ ಭಾವಚಿತ್ರವನ್ನು ಹಿಡಿದುಕೊಂಡಿದ್ದರು. ಹಾಗೂ ಮಂದಿರದ ಮುಖ್ಯಸ್ಥರಾದ ಶ್ರೀ.ನವನಾಥ ಕೋತೆಯವರು ವೀಣೆಯನ್ನು ಹಿಡಿದುಕೊಂಡು ಭಾಗವಹಿಸಿದ್ದರು.



ಸುಮಾರು 3000ಕ್ಕೂ ಹೆಚ್ಚು ಸಾಯಿ ಭಕ್ತರು ಗೋದಾವರಿ ನದಿಯಿಂದ ಕಾವಡಿಯಲ್ಲಿ ಹೊತ್ತು ತಂದ ಪವಿತ್ರ ಜಲದಿಂದ ಸಾಯಿಬಾಬಾರವರ ವಿಗ್ರಹ, ಸಮಾಧಿ ಮತ್ತು ಪಾದುಕೆಗಳಿಗೆ ಅಭಿಷೇಕ ಮಾಡಲಾಯಿತು.

ಬೆಳಿಗ್ಗೆ 10:30 ಹರಿಭಕ್ತ ಪರಾಯಣ ಶ್ರೀ.ವಿಕ್ರಮ್ ನಂಡೇಕರ್ ರವರು ಭಗವಾನ್ ಶ್ರೀರಾಮನ ಜನ್ಮವನ್ನು ಕುರಿತು ಕೀರ್ತನೆಯನ್ನು ಮಾಡಿದರು.

ಮಧ್ಯಾನ್ಹ ಆರತಿಗೆ ಮುಂಚೆ ಸಮಾಧಿ ಮಂದಿರದಲ್ಲಿ ಹೊಸ ಧ್ವಜಗಳಿಗೆ ಪೂಜೆಯನ್ನು ನೆರವೇರಿಸಲಾಯಿತು. ಇದರಲ್ಲಿ ಸಾಯಿ ಮಹಾಭಕ್ತ ದಿವಂಗತ ಶ್ರೀ.ರಾಸನೆ ಮತ್ತು ಶ್ರೀ.ನಾನಾ ಸಾಹೇಬ್ ನಿಮೋಣ್ಕರ್ ರವರ ವಂಶಸ್ಥರುಗಳು ಭಾಗವಹಿಸಿ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು. ಸಂಜೆ 4:00 ಗಂಟೆಗೆ ಧ್ವಜದ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು ಹಾಗೂ ಸಂಜೆ 5:00 ಕ್ಕೆ ಶಿರಡಿ ಗ್ರಾಮದ ಸುತ್ತಾ ಶ್ರೀ ಸಾಯಿಬಾಬಾರವರ ರಥೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಈ ಎರಡೂ ಕಾರ್ಯಕ್ರಮಗಳಲ್ಲಿ ಲಕ್ಷಾಂತರ ಸಾಯಿ ಭಕ್ತರು ಭಾಗವಹಿಸಿದ್ದರು.

ಕೊಲ್ಕತ್ತಾದ ಶ್ರೀ.ವಿವಾನಿ ರಾಯ್ ಚೌಧರಿ, ಶ್ರೀ.ಭುದ್ಮಾಲ್, ಶ್ರೀ.ಸುರೇಂದ್ರ ತುಳಶಿ, ಶ್ರೀ.ಕಮಲ್ ದುಗ್ಗರ್, ನವದೆಹಲಿಯ ಶ್ರೀ.ವೀರೇಂದ್ರ ಸುಂದರಮ್, ಬೆಂಗಳೂರಿನ ಶ್ರೀಮತಿ.ಸಾಯಿ ವಿಲ್ಲಿ ಶ್ರೀಜಾ ಸುದೀಶ್, ಶ್ರೀಮತಿ.ಭಾರತಿ ಶಿರಗೂರ್ಕರ್ ರವರುಗಳು ನೀಡಿದ ಉದಾರ ದೇಣಿಗೆಯ ಸಹಾಯದಿಂದ ಎಲ್ಲಾ ಸಾಯಿ ಭಕ್ತರಿಗೂ ಶ್ರೀ ಸಾಯಿ ಪ್ರಸಾದಾಲಯದಲ್ಲಿ ಉಚಿತ ಪ್ರಸಾದ ಭೋಜನವನ್ನು ಏರ್ಪಡಿಸಲಾಗಿತ್ತು.

ನಾಗಪುರದ ಇಂಡೋ ರಾಮ ಸಿಂಥಟಿಕ್ಸ್ ನವರು ನೀಡಿದ ದೇಣಿಗೆಯ ಸಹಾಯದಿಂದ ಶ್ರೀ ಸಾಯಿಬಾಬಾ ಸಂಸ್ಥಾನದ ಆವರಣ, ಸಮಾಧಿ ಮಂದಿರ, ಗುರುಸ್ಥಾನ, ದ್ವಾರಕಾಮಾಯಿ ಹಾಗೂ ಮತ್ತಿತರ ಕಡೆಗಳಲ್ಲಿ ಸುಂದರವಾದ ಹೂವುಗಳಿಂದ ಅಲಂಕರಿಸಲಾಗಿತ್ತು.




28ನೇ ಮಾರ್ಚ್ 2015, ಶನಿವಾರ ವು ಉತ್ಸವದ ಮುಖ್ಯ ದಿನವಾದ ಕಾರಣ ಸಮಾಧಿ ಮಂದಿರವನ್ನು ರಾತ್ರಿಯಿಡೀ ಭಕ್ತರ ದರ್ಶನಕ್ಕಾಗಿ ತೆರೆದಿಡಲಾಗಿತ್ತು. ಲಕ್ಷಾಂತರ ಸಾಯಿ ಭಕ್ತರು ಶ್ರೀ ಸಾಯಿಬಾಬಾರವರ ದರ್ಶನವನ್ನು ಮಾಡಿದರು.



ಮೂರನೇ ಹಾಗೂ ಕೊನೆಯ ದಿನದ ಶ್ರೀ ರಾಮನವಮಿ ಉತ್ಸವದ ಕಾರ್ಯಕ್ರಮಗಳನ್ನು 29ನೇ ಮಾರ್ಚ್ 2015, ಭಾನುವಾರ ದಂದು ಹಮ್ಮಿಕೊಳ್ಳಲಾಗಿತ್ತು.

 27ನೇ ಮಾರ್ಚ್ 2015, ಶುಕ್ರವಾರ ದಂದು ಪ್ರಾರಂಭವಾದ ಶ್ರೀ ರಾಮನವಮಿ ಉತ್ಸವವು ಹರಿ ಭಕ್ತ ಪರಾಯಣ ಶ್ರೀ.ವಿಕ್ರಂ ನಂದೇಡ್ಕರ್ ರವರ ಕಲ್ಯಾಚಿ ಕೀರ್ತನೆ (ಉತ್ಸವವನ್ನು ಸುಸಂಪನ್ನಗೊಳಿಸಲು ಮಾಡುವ ಕೀರ್ತನೆ) ಯೊಂದಿಗೆ ಅತ್ಯಂತ ಸಂತೋಷಭರಿತವಾಗಿ ಪೂರ್ಣಗೊಂಡಿತು.

ಬೆಂಗಳೂರಿನ ಸಾಯಿ ಭಕ್ತರಾದ ಶ್ರೀ.ಶೈಲೇಶ್ ಪಾಟೀಲ್ ರವರು 18 ಲಕ್ಷ ರೂಪಾಯಿ ಬೆಲೆ ಬಾಳುವ ಚಪಾತಿ ತಯಾರಿಸುವ ಯಂತ್ರವನ್ನು ಶ್ರೀ ಸಾಯಿಬಾಬಾ ಸಂಸ್ಥಾನದ ಶ್ರೀ ಸಾಯಿ ಪ್ರಸಾದಾಲಯಕ್ಕೆ ದೇಣಿಗೆಯಾಗಿ ನೀಡಿದರು. ವಿಧ್ಯುಕ್ತ ಪೂಜೆಯ ನಂತರ ಚಪಾತಿ ತಯಾರಿಸುವ ಯಂತ್ರಕ್ಕೆ  ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ಮತ್ತು ಅವರ ಧರ್ಮಪತ್ನಿ ಶ್ರೀಮತಿ.ಸರಿತಾ ಜಾಧವ್ ರವರುಗಳು ಚಾಲನೆ ನೀಡಿದರು. ಈ ಸ್ವಯಂ ಚಾಲಿತ ಯಂತ್ರವು ಗಂಟೆಗೆ ಸುಮಾರು 3000 ಚಪಾತಿಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದೆ. ಈ ಯಂತ್ರವನ್ನು ಶ್ರೀ ಸಾಯಿ ಪ್ರಸಾದಾಲಯದಲ್ಲಿ ಸ್ಥಾಪಿಸಿರುವ ಕಾರಣ ಮುಂದಿನ ದಿನಗಳಲ್ಲಿ ಸಾಯಿ ಭಕ್ತರಿಗೆ ಈಗ ನೀಡುತ್ತಿರುವಂತೆ ಪೂರಿಯ ಬದಲಿಗೆ ಚಪಾತಿಯನ್ನೇ ನೀಡಲು ಸಾಧ್ಯವಾಗುತ್ತದೆ.


ಆ ದಿನ ಬೆಳಗಿನ ಜಾವ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ರವರು ಗುರುಸ್ಥಾನ ಮಂದಿರದಲ್ಲಿ ರುದ್ರಾಭಿಷೇಕವನ್ನು ನೆರವೇರಿಸಿದರು.


ತ್ರಿಸದಸ್ಯ ಸಮಿತಿಯ ಅಧ್ಯಕ್ಷರೂ ಹಾಗೂ ಜಿಲ್ಲಾ ನ್ಯಾಯಾಧೀಶರೂ ಆದ ಶ್ರೀ.ವಿಜಯ್ ಜೋಷಿಯವರು ಶ್ರೀ ಸಾಯಿಬಾಬಾರವರ ಪಾದುಕೆಗಳಿಗೆ ಪಾದ ಪೂಜೆಯನ್ನು ನೆರವೇರಿಸಿದರು.


ಮಧ್ಯಾನ್ಹ 12 ಗಂಟೆಗೆ ಸಮಾಧಿ ಮಂದಿರದ ಆವರಣದಲ್ಲಿ ಹರಿ ಭಕ್ತ ಪರಾಯಣರಾದ ಶ್ರೀ.ವಿಕ್ರಮ್ ನಂದೇಡ್ಕರ್ ರವರು ಕಲ್ಯಾಚಿ ಕೀರ್ತನೆಯನ್ನು ಮಾಡಿದರು. ನಂತರ ದಹಿ ಹಂಡಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದಾದ ನಂತರ ಮಧ್ಯಾನ್ಹ ಆರತಿಯನ್ನು ಹಮ್ಮಿಕೊಳ್ಳಲಾಗಿತ್ತು.


ಹೈದರಾಬಾದ್ ನ ಸಾಯಿ ಭಕ್ತರಾದ ಶ್ರೀ.ಕರ್ಣಂ ನಾರಾಯಣ್ ಮತ್ತು ಮುಂಬೈನ ಶ್ರೀ.ಸುನಿಲ್ ಅಗರವಾಲ್ ರವರು ನೀಡಿದ ಉದಾರ ದೇಣಿಗೆಯ ಸಹಾಯದಿಂದ ಎಲ್ಲಾ ಸಾಯಿ ಭಕ್ತರಿಗೂ  ಶ್ರೀ ಸಾಯಿ ಪ್ರಸಾದಾಲಯದಲ್ಲಿ ಉಚಿತ ಪ್ರಸಾದ ಭೋಜನವನ್ನು ಏರ್ಪಡಿಸಲಾಗಿತ್ತು.

ದೇಶದ ವಿವಿಧ ಭಾಗಗಳಿಂದ ಶ್ರೀ ಸಾಯಿಬಾಬಾರವರ ದರ್ಶನಕ್ಕೆಂದು ಪಲ್ಲಕ್ಕಿಯನ್ನು ಹೊತ್ತು ನಡೆದುಬಂದಿದ್ದ ಪಾದಯಾತ್ರಿಗಳು ತಂಗುವ ಸಲುವಾಗಿ ಶ್ರೀ ಸಾಯಿಬಾಬಾ ಸಂಸ್ಥಾನವು ಸಾಯಿ ಆಶ್ರಮ - 2 ರಲ್ಲಿ ಉಚಿತವಾಗಿ ತಂಗುವ ವ್ಯವಸ್ಥೆಯನ್ನು ಮಾಡಿತ್ತು.

ಉತ್ಸವದ ಮುಖ್ಯ ದಿನವಾದ 28ನೇ ಮಾರ್ಚ್ 2015, ಶನಿವಾರ ದಂದು ಸುಮಾರು 70,000 ಸಾಯಿ ಭಕ್ತರಿಗೆ ಉಚಿತ ಪ್ರಸಾದ ಭೋಜನವನ್ನು ನೀಡಲಾಯಿತು. ಅಂತೆಯೇ, ದರ್ಶನದ ಸರತಿ ಸಾಲಿನಲ್ಲಿ ಬಂದು ಶ್ರೀ ಸಾಯಿಬಾಬಾರವರ ದರ್ಶನವನ್ನು ಮಾಡಿದ ಸುಮಾರು 90,000 ಸಾಯಿ ಭಕ್ತರಿಗೆ ಉಚಿತ ಲಾಡು ಪ್ರಸಾದವನ್ನು ವಿತರಿಸಲಾಯಿತು.

ಕಳೆದ 37 ವರ್ಷಗಳಿಂದ ಸತತವಾಗಿ ಸಾಯಿ ಸೇವೆಯಲ್ಲಿ ನಿರತವಾಗಿ ಎಲ್ಲಾ ಉತ್ಸವದ ಸಂದರ್ಭದಲ್ಲಿ ಸಮಾಧಿ ಮಂದಿರ ಹಾಗೂ ಸುತ್ತಮುತ್ತಲಿನ ಪರಿಸರವನ್ನು ವರ್ಣರಂಜಿತ ವಿದ್ಯುತ್ ದೀಪಗಳಿಂದ ಅಲಂಕರಿಸಿ ಹಾಗೂ ಗುರುಸ್ಥಾನದ ಮುಂಭಾಗದಲ್ಲಿ ಬೃಹತ್ ಮಹಾದ್ವಾರವನ್ನು ನಿರ್ಮಿಸುತ್ತಾ ಬಂದಿರುವ ಶ್ರೀ ದ್ವಾರಕಮಾಯಿ ಮಂಡಲಿ, ಮುಂಬೈನ ಎಲ್ಲಾ ಪದಾಧಿಕಾರಿಗಳಿಗೆ ಶ್ರೀ ಸಾಯಿಬಾಬಾ ಸಂಸ್ಥಾನದ ವತಿಯಿಂದ ಸನ್ಮಾನಿಸಲಾಯಿತು.

ಉತ್ಸವವು ಅತ್ಯಂತ ಯಶಸ್ವಿಯಾಗಿ ನಡೆಯುವಂತೆ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ ಶ್ರೀ ಸಾಯಿಬಾಬಾ ಸಂಸ್ಥಾನದ ಎಲ್ಲಾ ನೌಕರರು, ಪ್ರಸಾದಾಲಯ ಮತ್ತು ಇತರ ಎಲ್ಲಾ ವಿಭಾಗದ ನೌಕರರು ಹಾಗೂ ಶಿರಡಿ ಗ್ರಾಮಸ್ಥರನ್ನು ಈ ಸಂದರ್ಭದಲ್ಲಿ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ರವರು ಅಭಿನಂದಿಸಿದರು.

ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್, ಬೆಂಗಳೂರು
ಕನ್ನಡ ಅನುವಾದ: ಶ್ರೀಕಂಠ ಶರ್ಮ

Sunday, March 22, 2015

ಶ್ರೀ ಸಾಯಿಬಾಬಾ ಸಂಸ್ಥಾನದ ವತಿಯಿಂದ ಶ್ರೀರಾಮನವಮಿ ಉತ್ಸವ - ಪತ್ರಿಕಾ ಪ್ರಕಟಣೆ - ಕೃಪೆ: ಸಾಯಿಅಮೃತಧಾರಾ.ಕಾಂ

ಪ್ರತಿ ವರ್ಷದಂತೆ ಈ ವರ್ಷವೂ ಸಹ ಶ್ರೀ ಸಾಯಿಬಾಬಾ ಸಂಸ್ಥಾನವು ಶ್ರೀರಾಮನವಮಿ ಉತ್ಸವವನ್ನು ಇದೇ ತಿಂಗಳ  27ನೇ ಮಾರ್ಚ್ 2015,ಶುಕ್ರವಾರ ದಿಂದ  29ನೇ ಮಾರ್ಚ್ 2015, ಭಾನುವಾರ ದವರೆಗೆ ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಿದೆ ಎಂದು ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ರವರು ಇದೇ ತಿಂಗಳ 20ನೇ ಮಾರ್ಚ್ 2015, ಶುಕ್ರವಾರ ದಂದು ನೀಡಿದ ಪತ್ರಿಕಾ ಪ್ರಕಟಣೆಯಲ್ಲಿ ಸುದ್ಧಿಗಾರರಿಗೆ ತಿಳಿಸಿದ್ದಾರೆ. 

ಸುದ್ಧಿಗಾರರೊಂದಿಗೆ ಮಾತನಾಡಿದ ಶ್ರೀ. ಜಾಧವ್ ರವರು 1911ನೇ ಇಸವಿಯಲ್ಲಿ ಸಾಯಿಬಾಬಾರವರ ಅಪ್ಪಣೆಯ ಮೇರೆಗೆ ಪ್ರಾರಂಭಿಸಲಾದ ಈ ಉತ್ಸವವನ್ನು ಇಂದಿಗೂ ಅಷ್ಟೇ ಸಡಗರ ಸಂಭ್ರಮಗಳಿಂದ ಶ್ರೀ ಸಾಯಿಬಾಬಾ ಸಂಸ್ಥಾನವು ಆಚರಿಸಿಕೊಂಡು ಬರುತ್ತಿದ್ದು ಈ ಸಮಯದಲ್ಲಿ ಶಿರಡಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು. 

ಕಾರ್ಯಕ್ರಮ ವಿವರ: 
27-3-2015;  ಶುಕ್ರವಾರ  - (ಮೊದಲ ದಿನ)

ಬೆಳಿಗ್ಗೆ:  
4.30 am : ಕಾಕಡಾ ಆರತಿ. 
5.00 am: ಶ್ರೀ ಸಾಯಿಬಾಬಾ ವಿಗ್ರಹ, ಭಾವಚಿತ್ರ ಮತ್ತು ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯ ಮೆರವಣಿಗೆ. 
5.15 am: ದ್ವಾರಕಾಮಾಯಿಯಲ್ಲಿ ಅಖಂಡ ಶ್ರೀ ಸಾಯಿ ಸಚ್ಚರಿತ್ರೆಯ ಪಾರಾಯಣ ಪ್ರಾರಂಭ.  
5.20 am: ಶ್ರೀ ಸಾಯಿಬಾಬಾರವರ ವಿಗ್ರಹಕ್ಕೆ ಮಂಗಳ ಸ್ನಾನ ಹಾಗೂ ಆನಂತರದಲ್ಲಿ ದರ್ಶನ ಪ್ರಾರಂಭ. 

ಮಧ್ಯಾನ್ಹ: 
12.30  noon: ಮಧ್ಯಾನ್ಹ ಆರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ. 

ಸಂಜೆ:  
4.00 pm - 6.00 pm: ಸಮಾಧಿ ಮಂದಿರದ ಎದುರುಗಡೆ ನಿರ್ಮಿಸಲಾಗುವ ವೇದಿಕೆಯಲ್ಲಿ ಕೀರ್ತನೆಯ ಆಯೋಜನೆ.  
6.30 pm: ಧೂಪಾರತಿ. 

ರಾತ್ರಿ:  
7.30 pm - 10.00 pm: ಸಾಯಿನಗರ ಮೈದಾನದಲ್ಲಿ ಆಹ್ವಾನಿತ ಕಲಾವಿದರಿಂದ ಕಾರ್ಯಕ್ರಮ.  
9.15 pm: ಶಿರಡಿ ಗ್ರಾಮದ ಸುತ್ತಾ ಪಲ್ಲಕ್ಕಿ ಉತ್ಸವದ ಆಯೋಜನೆ.  
10.30 pm: ಶೇಜಾರತಿ.  

ಅಖಂಡ ಪಾರಾಯಣದ ಅಂಗವಾಗಿ ದ್ವಾರಕಾಮಾಯಿಯನ್ನು ರಾತ್ರಿಯಿಡೀ ತೆರೆದಿಡಲಾಗುತ್ತದೆ. 

28-3-2015;  ಶನಿವಾರ  (ಮುಖ್ಯ ದಿವಸ) - ಎರಡನೇ ದಿನ  

ಬೆಳಿಗ್ಗೆ: 
4.30 am : ಕಾಕಡಾ ಆರತಿ. 
5.00 am: ಅಖಂಡ ಪಾರಾಯಣ ಮುಕ್ತಾಯ. ಶ್ರೀ ಸಾಯಿಬಾಬಾ ವಿಗ್ರಹ, ಭಾವಚಿತ್ರ ಮತ್ತು ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯ ಮೆರವಣಿಗೆ. 
5.15 am: ಶ್ರೀ ಸಾಯಿಬಾಬಾರವರ ವಿಗ್ರಹಕ್ಕೆ ಮಂಗಳ ಸ್ನಾನ ಹಾಗೂ ಆನಂತರದಲ್ಲಿ ದರ್ಶನ ಪ್ರಾರಂಭ.
10.00 am – 12.00 pm: ಸಮಾಧಿ ಮಂದಿರದ ಎದುರುಗಡೆ ನಿರ್ಮಿಸಲಾಗುವ ವೇದಿಕೆಯಲ್ಲಿ ಶ್ರೀ ರಾಮ ಜನ್ಮ ಕೀರ್ತನೆಯ ಆಯೋಜನೆ. 

ಮಧ್ಯಾನ್ಹ: 
12.30  noon: ಮಧ್ಯಾನ್ಹ ಆರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ. 

ಸಂಜೆ:  
4.00 pm: ಧ್ವಜಗಳ ಮೆರವಣಿಗೆ.  
5:00 pm: ಶಿರಡಿ ಗ್ರಾಮದ ಸುತ್ತಾ ಶ್ರೀ ಸಾಯಿಬಾಬಾರವರ ರಥೋತ್ಸವದ ಆಯೋಜನೆ. 
6.30 pm: ರಥೋತ್ಸವ ವಾಪಸಾದ ನಂತರ ಶ್ರೀ ಸಾಯಿಬಾಬಾರವರ ಧೂಪಾರತಿ.  

ರಾತ್ರಿ:  
7.30 pm - 10.00 pm: ಸಾಯಿನಗರ ಮೈದಾನದಲ್ಲಿ ಆಹ್ವಾನಿತ ಕಲಾವಿದರಿಂದ ಕಾರ್ಯಕ್ರಮ.  
10.00 pm to 5.00 am (ಮಾರನೇ ದಿನ): ಸಾಯಿಬಾಬಾ ಭಕ್ತರಿಂದ  ಸಮಾಧಿ ಮಂದಿರದ ಪ್ರಾಂಗಣದಲ್ಲಿರುವ ವೇದಿಕೆಯಲ್ಲಿ ಸಾಯಿ ಭಜನೆಯ ಕಾರ್ಯಕ್ರಮ. 

ಮುಖ್ಯ ದಿನದ ಅಂಗವಾಗಿ, ರಾತ್ರಿಯಿಡೀ ಸಮಾಧಿ ಮಂದಿರವನ್ನು ಸಾಯಿ ಭಕ್ತರ ದರ್ಶನಕ್ಕಾಗಿ ತೆರೆದಿಡಲಾಗುತ್ತದೆ. ಆದ ಕಾರಣ ಆ ರಾತ್ರಿಯ ಶೇಜಾರತಿ ಹಾಗೂ ಮಾರನೇ ದಿನ ಅಂದರೆ  29ನೇ ಮಾರ್ಚ್ 2015 ರ ಬೆಳಗಿನ ಕಾಕಡಾ ಆರತಿ ಇರುವುದಿಲ್ಲ. 

29-03-2015;  ಭಾನುವಾರ (ಕೊನೆಯ ದಿನ) - ಮೂರನೇ ದಿನ  

ಬೆಳಿಗ್ಗೆ:  
5.05 am: ಶ್ರೀ ಸಾಯಿಬಾಬಾರವರ ವಿಗ್ರಹಕ್ಕೆ ಮಂಗಳ ಸ್ನಾನ ಹಾಗೂ ಆನಂತರದಲ್ಲಿ ದರ್ಶನ ಪ್ರಾರಂಭ.
6.30 am: ಗುರುಸ್ಥಾನದಲ್ಲಿರುವ ಶಿವಲಿಂಗಕ್ಕೆ ರುದ್ರಾಭಿಷೇಕ.  
10:30 am: ಗೋಪಾಲ ಕಾಲಾ ಮತ್ತು ದಹಿ ಹಂಡಿ ಕಾರ್ಯಕ್ರಮ. 

ಮಧ್ಯಾನ್ಹ:  
12.10  noon: ಮಧ್ಯಾನ್ಹ ಆರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ. 

ಸಂಜೆ:  
6.30 pm: ಧೂಪಾರತಿ.  

ರಾತ್ರಿ:  
7.30 pm - 10.00 pm: ಸಾಯಿನಗರ ಮೈದಾನದಲ್ಲಿ ಆಹ್ವಾನಿತ ಕಲಾವಿದರಿಂದ ಕಾರ್ಯಕ್ರಮ.  
10.30 pm: ಶೇಜಾರತಿ.  

ಶ್ರೀರಾಮನವಮಿ ಉತ್ಸವದ ಅಂಗವಾಗಿ 27ನೇ ಮಾರ್ಚ್ 2015 ರಿಂದ  28ನೇ ಮಾರ್ಚ್ 2015 ರವರೆಗೂ ಶ್ರೀ ಸಾಯಿ ಸತ್ಯವ್ರತ ಪೂಜೆ ಹಾಗೂ ಅಭಿಷೇಕ ಪೂಜೆಯ ಸೇವಾ ಪತ್ರಕಗಳನ್ನು ವಿತರಿಸಲಾಗುವುದಿಲ್ಲ.  

ದ್ವಾರಕಾಮಾಯಿಯಲ್ಲಿ ಮೊದಲ ದಿನದಂದು ಶ್ರೀ ಸಾಯಿ ಸಚ್ಚರಿತ್ರೆಯ ಪಾರಾಯಣ ಮಾಡಲು ಇಚ್ಛಿಸುವ ಸಾಯಿ ಭಕ್ತರು 26ನೇ ಮಾರ್ಚ್ 2015 ರಂದು ಮಧ್ಯಾನ್ಹ 2 pm  ರಿಂದ  6 pm ಗಂಟೆಯವರೆಗೆ ಸಮಾಧಿ ಮಂದಿರದ ಮುಂಭಾಗದಲ್ಲಿ ನಿರ್ಮಿಸಲಾಗುವ ವಿಶೇಷ ವೇದಿಕೆಯ ಬಳಿಗೆ ತೆರಳಿ ತಮ್ಮ ಹೆಸರನ್ನು ನೊಂದಾಯಿಸತಕ್ಕದ್ದು. ಹಾಗೂ ಅದೇ ದಿನ ಸಂಜೆ 7 ಗಂಟೆಗೆ ಲಕ್ಕಿ ಡ್ರಾ ಮೂಲಕ ಪಾರಾಯಣ ಮಾಡಲು ಆಯ್ಕೆಯಾಗಿರುವವರ  ಹೆಸರನ್ನು ನಿರ್ಧರಿಸಿ ಪ್ರಕಟಿಸಲಾಗುವುದು. 

ಅಂತೆಯೇ 28ನೇ ಮಾರ್ಚ್ 2015 ರಂದು ರಾತ್ರಿ ಸಮಾಧಿ ಮಂದಿರದ ಪ್ರಾಂಗಣದಲ್ಲಿನ ವೇದಿಕೆಯ ಮೇಲೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಸಾಯಿ ಭಕ್ತರು ಪ್ರಕಟಣಾ ಕೊಠಡಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸತಕ್ಕದ್ದು. 

ಸಾಯಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಶ್ರೀರಾಮನವಮಿ ಉತ್ಸವದಲ್ಲಿ ಪಾಲ್ಗೊಂಡು ಉತ್ಸವವನ್ನು ಯಶಸ್ವಿಗೊಳಿಸಬೇಕೆಂದು ಶ್ರೀ.ರಾಜೇಂದ್ರ ಜಾಧವ್ ರವರು ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದಾರೆ. 

ಈ ಉತ್ಸವವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ  ಅಧ್ಯಕ್ಷರೂ ಹಾಗೂ ಮುಖ್ಯ ಜಿಲ್ಲಾ ನ್ಯಾಯಾಧೀಶರೂ ಆದ ಶ್ರೀ. ವಿನಯ್ ಜೋಷಿಯವರ ಮಾರ್ಗದರ್ಶನದಲ್ಲಿ ತ್ರಿಸದಸ್ಯ ಸಮಿತಿಯ ಸದಸ್ಯರು ಹಾಗೂ ಜಿಲ್ಲಾಧಿಕಾರಿಯಾದ ಶ್ರೀ.ಅನಿಲ್ ಕಾವಡೆ, ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ಎಲ್ಲಾ ಕಾರ್ಯ ನಿರ್ವಾಹಕ ಅಧಿಕಾರಿಗಳೂ, ಶ್ರೀ ಸಾಯಿಬಾಬಾ ಸಂಸ್ಥಾನದ ಎಲ್ಲಾ ಸಿಬ್ಬಂದಿ ವರ್ಗದವರುಗಳು ಬಹಳ ಶ್ರಮವಹಿಸಿ ಕಾರ್ಯ ನಿರ್ವಹಿಸಿರುತ್ತಾರೆ ಎಂದು ಶ್ರೀ ರಾಜೇಂದ್ರ ಜಾಧವ್ ಸುದ್ಧಿಗಾರರಿಗೆ ತಿಳಿಸಿದರು. 

ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್, 
ಕನ್ನಡ ಅನುವಾದ: ಶ್ರೀಕಂಠ ಶರ್ಮ 

ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಸ್ವಚ್ಛತಾ ಸಿಬ್ಬಂದಿಗೆ ಹೆಚ್ಚಿನ ಸೌಲಭ್ಯದ ಭರವಸೆ - ಕೃಪೆ: ಸಾಯಿಅಮೃತಧಾರಾ. ಕಾಂ

ಶ್ರೀ ಸಾಯಿಬಾಬಾ ಸಂಸ್ಥಾನದ ಆರೋಗ್ಯ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ಸ್ವಚ್ಛತಾ ಸಿಬ್ಬಂದಿಗೆ ಹೆಚ್ಚಿನ ಸೌಲಭ್ಯ ಮತ್ತು ಸುರಕ್ಷತೆಯ ಕ್ರಮಗಳನ್ನು ಕೈಗೊಳ್ಳುವ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನವು ಹೆಚ್ಚಿನ ಸುರಕ್ಷತೆ ಮತ್ತು ಇತರ ಸೌಲಭ್ಯಗಳನ್ನು ತನ್ನ ಸ್ವಚ್ಛತಾ ಸಿಬ್ಬಂದಿಗೆ ನೀಡಲಿದೆ ಎಂದು ಕೇಂದ್ರ ಸ್ವಚ್ಛತಾ ಸಿಬ್ಬಂದಿ ಆಯೋಗದ ಸದಸ್ಯರಾದ ಶ್ರೀ.ವಿಜಯ ಕುಮಾರ್ ರವರು ಸುದ್ಧಿಗಾರರಿಗೆ ತಿಳಿಸಿದರು. 


ಈ ನಿಟ್ಟಿನಲ್ಲಿ ಇದೇ ತಿಂಗಳ 18ನೇ ಮಾರ್ಚ್ 2015, ಬುಧವಾರ ದಂದು ಮಧ್ಯಾನ್ಹ 2 ಗಂಟೆಗೆ ಶ್ರೀ ಸಾಯಿಬಾಬಾ ಸಂಸ್ಥಾನದ ಸಭಾಂಗಣದಲ್ಲಿ ವಿಚಾರ ಸಂಕಿರಣವೊಂದನ್ನು ಆಯೋಜಿಸಲಾಗಿತ್ತು. ಈ ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಕೇಂದ್ರ ಸ್ವಚ್ಛತಾ ಸಿಬ್ಬಂದಿ ಆಯೋಗದ ಸದಸ್ಯರಾದ ಶ್ರೀ.ವಿಜಯ ಕುಮಾರ್ ರವರು ವಹಿಸಿದ್ದರು. ಶ್ರೀ ಸಾಯಿಬಾಬಾ ಸಂಸ್ಥಾನದ ಎಲ್ಲಾ ಸ್ವಚ್ಛತಾ ಸಿಬ್ಬಂದಿಗಳು, ಕಾರ್ಯಕಾರಿ ಅಧಿಕಾರಿ ಶ್ರೀ.ರಾಜೇಂದ್ರ ಜಾಧವ್, ಉಪ ಕಾರ್ಯಕಾರಿ ಅಧಿಕಾರಿ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ನಿರ್ವಹಣಾ ಅಧಿಕಾರಿಗಳಾದ ಶ್ರೀ.ಬಾವುಸಾಹೇಬ್ ಸಬಲೆ, ಶ್ರೀ.ಎಸ್.ಎನ್. ಗಾರ್ಕಲ್, ಶ್ರೀ.ಎಸ್.ವಿ.ಗಮೆ, ಶ್ರೀ.ಡಿ.ಟಿ.ಉಗಳೆ, ಶ್ರೀ.ಯು.ಪಿ.ಗೊಂದ್ಕರ್, ವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಶ್ರೀ.ಪಾಂಡುರಂಗ ಕಾವಡೆಯವರುಗಳು ಈ ವಿಚಾರ ಸಂಕಿರಣದಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದರು. 

ಶ್ರೀ ಸಾಯಿಬಾಬಾ ಸಂಸ್ಥಾನ ಮತ್ತು ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿ ಇರಿಸುವ ಸಲುವಾಗಿ ಶ್ರೀ ಸಾಯಿಬಾಬಾ ಸಂಸ್ಥಾನವು 377 ಸ್ವಚ್ಛತಾ ಸಿಬ್ಬಂದಿಯನ್ನು ತಾತ್ಕಾಲಿಕ ಮತ್ತು ಪೂರ್ಣಾವಧಿ ಆಧಾರದಲ್ಲಿ ನೇಮಕ ಮಾಡಿರುತ್ತದೆ. ಅಲ್ಲದೆ 667 ಸ್ವಚ್ಛತಾ ಸಿಬ್ಬಂದಿಯನ್ನು ಹೊರಗುತ್ತಿಗೆ ಸಂಸ್ಥೆಯೊಂದರ ಮೂಲಕ ಹಂಗಾಮಿಯಾಗಿ ನೇಮಕ ಮಾಡಿಕೊಳ್ಳಲಾಗಿದೆ.  ಈ ಎಲ್ಲಾ ಸ್ವಚ್ಛತಾ ಸಿಬ್ಬಂದಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅವರುಗಳಿಗೆ ರಬ್ಬರ್ ಗಮ್  ಬೂಟುಗಳು, ಮಳೆಯಂಗಿ (ರೈನ್ ಕೋಟ್) ಗಳು, ಮುಖವಾಡ (ಮಾಸ್ಕ್) ಗಳು ಮತ್ತು ಕೈಚೀಲಗಳನ್ನು ವಿತರಿಸಲಾಗಿದೆ. ಅಷ್ಟೆ ಅಲ್ಲದೆ, ಎಲ್ಲ ರೀತಿಯ ಅತ್ಯಾಧುನಿಕ ಸೌಲಭ್ಯಗಳನ್ನು ಸಹ ಒದಗಿಸಲಾಗಿದೆ. ಎಲ್ಲಾ ಪೂರ್ಣಾವಧಿ ನೌಕರರಿಗೆ ಮನೆ ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಹಂಗಾಮಿ ನೌಕರರಿಗೆ ಸಹ ವೈದ್ಯಕೀಯ ಸೌಲಭ್ಯವನ್ನು ನೀಡಲಾಗಿದೆ.  ಎಲ್ಲ ಸ್ವಚ್ಛತಾ ಸಿಬ್ಬಂದಿಗಳಿಗೆ ಸಂಸ್ಥಾನದ ಶ್ರೀ ಸಾಯಿಬಾಬಾ ಆಸ್ಪತ್ರೆಯಲ್ಲಿ ಉಚಿತ ವೈದ್ಯಕೀಯ ತಪಾಸಣೆಯನ್ನು ಮಾಡಲಾಗುತ್ತದೆ ಎಂದು ಶ್ರೀ.ವಿಜಯ್ ಕುಮಾರ್ ರವರು ಸುದ್ಧಿಗಾರರಿಗೆ ತಿಳಿಸಿದರು. ಅಷ್ಟೆ ಅಲ್ಲದೆ ಸ್ವಚ್ಛತಾ ಸಿಬ್ಬಂದಿಗೆ ಹೆಚ್ಚಿನ ಸೌಲಭ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಮೂರು ತಿಂಗಳಿಗೊಮ್ಮೆ ಉಚಿತ ವೈದ್ಯಕೀಯ ತಪಾಸಣೆ ಮತ್ತು ಅವರು ವಾಸಿಸುವ ಕೋಣೆಗಳನ್ನು ಅದಲು-ಬದಲು ಮಾಡಬೇಕೆಂದು ಕೂಡ ಶ್ರೀ ಸಾಯಿಬಾಬಾ ಸಂಸ್ಥಾನಕ್ಕೆ ತಾಕೀತು ಮಾಡಿದರು. 

ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್, ಬೆಂಗಳೂರು 
ಕನ್ನಡ ಅನುವಾದ: ಶ್ರೀಕಂಠ ಶರ್ಮ 

Saturday, March 21, 2015

ಶ್ರೀ ಸಾಯಿಬಾಬಾ ಸಂಸ್ಥಾನದ ವತಿಯಿಂದ ಗುಡಿಪಾಡ್ವ ಹಬ್ಬದ ಆಚರಣೆ - ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀ ಸಾಯಿಬಾಬಾ ಸಂಸ್ಥಾನದ ವತಿಯಿಂದ ಇದೇ ತಿಂಗಳ 21ನೇ ಮಾರ್ಚ್ 2015, ಶನಿವಾರ ದಂದು ಗುಡಿಪಾಡ್ವ ಹಬ್ಬವನ್ನು ಅತ್ಯಂತ  ಆಚರಿಸಿತು. ಈ ಸಂಧರ್ಭದಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ (ಶಿರಡಿ) ನ ಉಪ ಕಾರ್ಯಕಾರಿ ಅಧಿಕಾರಿ ಶ್ರೀ.ಅಪ್ಪಾಸಾಹೇಬ್ ಶಿಂಧೆ ಮತ್ತು ಅವರ ಧರ್ಮಪತ್ನಿಯವರು ಸಮಾಧಿ ಮಂದಿರದ ಮೇಲು ಗೋಪುರದ ಕಳಶಕ್ಕೆ ವಿಧ್ಯುಕ್ತವಾಗಿ ಪೂಜೆಯನ್ನು ಸಲ್ಲಿಸಿದರು. 

ಕನ್ನಡ ಅನುವಾದ: ಶ್ರೀಕಂಠ ಶರ್ಮ 

Thursday, March 19, 2015

ಅಕ್ಕಿ, ಸಾಸಿವೆ ಕಾಳು ಹಾಗೂ ಎಳ್ಳಿನಿಂದ ರಚಿಸಲಾದ ಶ್ರೀ ಸಾಯಿ ಲೀಲಾಮೃತ ಗ್ರಂಥದ ಲೋಕಾರ್ಪಣೆ - ಕೃಪೆ: ಸಾಯಿಅಮೃತಧಾರಾ.ಕಾಂ

ಔರಂಗಾಬಾದ್ ನ ಸಾಯಿ  ಭಕ್ತರೂ ಹಾಗೂ ಲೇಖಕರಾದ ಶ್ರೀ.ಗಜೇಂದ್ರ ವದೋನ್ಕರ್ ರವರು ಅಕ್ಕಿ, ಸಾಸಿವೆ ಕಾಳು ಹಾಗೂ ಎಳ್ಳಿನಿಂದ ರಚಿಸಿದ ಶ್ರೀ ಸಾಯಿ ಲೀಲಾಮೃತ ಗ್ರಂಥವನ್ನು ಇದೇ ತಿಂಗಳ 19ನೇ ಮಾರ್ಚ್ 2015, ಗುರುವಾರ ದಂದು ಲೋಕಾರ್ಪಣೆ ಮಾಡಲಾಯಿತು. ಲೇಖಕರು  ಗ್ರಂಥವನ್ನು ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ ರಾಜೇಂದ್ರ ಜಾಧವ್ ರವರಿಗೆ ಸಮರ್ಪಣೆ ಮಾಡಿದರು. ಆ ಸಂದರ್ಭದಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ಶ್ರೀ.ವಿಜಯ್ ಕೋತೆ, ಎಲ್ಲಾ ಕಾರ್ಯ ನಿರ್ವಾಹಕ ಅಧಿಕಾರಿಗಳು ಹಾಗೂ ಸಾಯಿಬಾಬಾ ಸಂಸ್ಥಾನದ ಮುಖ್ಯ ಲೆಕ್ಕಾಧಿಕಾರಿಗಳು ಸಹ ಉಪಸ್ಥಿತರಿದ್ದರು. 



ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್, ಬೆಂಗಳೂರು 
ಕನ್ನಡ ಅನುವಾದ: ಶ್ರೀಕಂಠ ಶರ್ಮ 


Monday, March 16, 2015

ಭಾರತೀಯ ಕ್ರಿಕೆಟ್ ತಾರೆ ಶ್ರೀ.ಮುರಳಿ ಕಾರ್ತಿಕ್ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ. ಕಾಂ

ಭಾರತೀಯ ಕ್ರಿಕೆಟ್  ತಾರೆ ಶ್ರೀ.ಮುರಳಿ ಕಾರ್ತಿಕ್ ರವರು ಇದೇ ತಿಂಗಳ 16ನೇ ಮಾರ್ಚ್ 2015, ಸೋಮವಾರ ದಂದು ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ  ಸಮಾಧಿಯ  ದರ್ಶನವನ್ನು ಪಡೆದರು. 


 ಕನ್ನಡ ಅನುವಾದ: ಶ್ರೀಕಂಠ ಶರ್ಮ 

ಮಹೀಂದ್ರ ಅಂಡ್ ಮಹೀಂದ್ರ ಸಂಸ್ಥೆಯಿಂದ ಶಿರಡಿ ಸಾಯಿಬಾಬಾ ಸಂಸ್ಥಾನಕ್ಕೆ ಅರ್ಜುನ್ ನೋಹಾ ಟ್ರಾಕ್ಟರ್ ನ ಕೊಡುಗೆ - ಕೃಪೆ: ಸಾಯಿಅಮೃತಧಾರಾ.ಕಾಂ

ಮಹೀಂದ್ರ ಅಂಡ್ ಮಹೀಂದ್ರ ಸಂಸ್ಥೆಯು ಇದೇ ತಿಂಗಳ  16ನೇ ಮಾರ್ಚ್ 2015, ಸೋಮವಾರ ದಂದು ಶಿರಡಿ ಸಾಯಿಬಾಬಾ ಸಂಸ್ಥಾನಕ್ಕೆ 7,50,000/- ರೂಪಾಯಿ ಬೆಲೆಬಾಳುವ ಅರ್ಜುನ್ ನೋಹಾ ಟ್ರಾಕ್ಟರ್ ಅನ್ನು  ಕೊಡುಗೆಯಾಗಿ ನೀಡಿತು. ಆ ಸಂದರ್ಭದಲ್ಲಿ ಮಹೀಂದ್ರ ಅಂಡ್ ಮಹೀಂದ್ರ ಸಮೂಹ ಸಂಸ್ಥೆಯ ತಯಾರಿಕಾ ಘಟಕದ ಹಿರಿಯ ಉಪಾಧ್ಯಕ್ಷರಾದ ಶ್ರೀ.ಕೆ.ಜಿ.ಶಣೈ ಹಾಗೂ ಹಿರಿಯ ವ್ಯವಸ್ಥಾಪಕರಾದ ಶ್ರೀ.ಸುಬೋಧ್ ಮೋರೆಯವರುಗಳು ಟ್ರಾಕ್ಟರ್ ನ ಕೀಲಿಕೈಯನ್ನು ಶ್ರೀ ಸಾಯಿಬಾಬಾ ಸಂಸ್ಥಾನದ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆಯವರಿಗೆ ನೀಡಿದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ 

Friday, March 13, 2015

ಗುಜರಾತಿ ಶಿರಡಿ ಸಾಯಿಬಾಬಾ ಭಕ್ತರಿಂದ ಸಾಯಿಬಾಬಾನಿಗೆ ಚಿನ್ನದ ಕಿರೀಟದ ಕೊಡುಗೆ - ಕೃಪೆ: ಸಾಯಿಅಮೃತಧಾರಾ.ಕಾಂ

ಅನಾಮಧೇಯ ಗುಜರಾತಿ ಸಾಯಿಭಕ್ತರೊಬ್ಬರು ಇದೇ ತಿಂಗಳ 13ನೇ ಮಾರ್ಚ್ 2015, ಶುಕ್ರವಾರ ದಂದು ಸಾಯಿಬಾಬನಿಗೆ 1250 ಗ್ರಾಂ ತೂಕದ 30,82,500/- ಬೆಲೆಬಾಳುವ ಚಿನ್ನದ ಕಿರೀಟವನ್ನು ಕಾಣಿಕೆಯಾಗಿ ನೀಡಿದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ 

Wednesday, March 11, 2015

ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ರಂಗಪಂಚಮಿ ಉತ್ಸವದ ಆಚರಣೆ - ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ (ಶಿರಡಿ) ಯು  ಇದೇ ತಿಂಗಳ 11ನೇ ಮಾರ್ಚ್ 2015, ಬುಧವಾರ ದಂದು ರಂಗಪಂಚಮಿ ಉತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಿತು. ಈ ಸಂದರ್ಭದಲ್ಲಿ ಶ್ರೀ ಶಿರಡಿ ಸಾಯಿಬಾಬಾರವರ ರಥೋತ್ಸವವನ್ನು ಶಿರಡಿ ಗ್ರಾಮದ ಸುತ್ತಲೂ ಕೊಂಡೊಯ್ಯಲಾಯಿತು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ 

Thursday, March 5, 2015

ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಹೋಳಿ ಆಚರಣೆ - ಕೃಪೆ; ಸಾಯಿಅಮೃತಧಾರಾ.ಕಾಂ

ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ (ಶಿರಡಿ) ಯ ವತಿಯಿಂದ ಇದೇ  ತಿಂಗಳ 5ನೇ ಮಾರ್ಚ್ 2015, ಗುರುವಾರ ದಂದು ಗುರುಸ್ಥಾನದ ಮುಂಭಾಗದಲ್ಲಿ ಹೋಳಿ ಹಬ್ಬದ ಅಂಗವಾಗಿ ಧಾರ್ಮಿಕ ವಿಧಿ-ವಿಧಾನಗಳನ್ನು ಹಮ್ಮಿಕೊಳ್ಳಲಾಗಿತ್ತು. ಶಿರಡಿ ಸಾಯಿಬಾಬಾ ಸಂಸ್ಥಾನದ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ ಮತ್ತು ಅವರ ಧರ್ಮಪತ್ನಿಯವರು ಸಾಯಿಬಾಬಾ ಸಂಸ್ಥಾನದ ಪರವಾಗಿ ಪೂಜೆಯನ್ನು ವಿಧಿವತ್ತಾಗಿ ನೆರವೇರಿಸಿದರು. 



ಕನ್ನಡ ಅನುವಾದ: ಶ್ರೀಕಂಠ ಶರ್ಮ 

Wednesday, March 4, 2015

ಗುಜರಾತ್ ರಾಜ್ಯಪಾಲ ಶ್ರೀ.ಓ.ಪಿ.ಕೊಹ್ಲಿ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಗುಜರಾತ್ ನ ರಾಜ್ಯಪಾಲರಾದ ಸನ್ಮಾನ್ಯ ಶ್ರೀ.ಓ.ಪಿ.ಕೊಹ್ಲಿಯವರು ಇದೇ ತಿಂಗಳ 4ನೇ ಮಾರ್ಚ್ 2015, ಬುಧವಾರ ದಂದು ಶಿರಡಿಗೆ ಭೇಟಿ ನೀಡಿ ಶ್ರೀ.ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ  ಶ್ರೀ.ಮೋಹನ್ ಜಗನ್ನಾಥ್ ಯಾದವ್ ರವರು ಕೂಡ ಉಪಸ್ಥಿತರಿದ್ದರು. 


 ಕನ್ನಡ ಅನುವಾದ: ಶ್ರೀಕಂಠ ಶರ್ಮ