Nothing Special   »   [go: up one dir, main page]

ವಿಷಯಕ್ಕೆ ಹೋಗು

ಟೆನಸೀ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟೆನಸೀ -ಅಮೆರಿಕ ಸಂಯುಕ್ತ ಸಂಸ್ಥಾನಗಳ ರಾಜ್ಯಗಳಲ್ಲೊಂದು.

ಉತ್ತರದಲ್ಲಿ ಕೆಂಟಕೀ ಹಾಗೂ ವರ್ಜಿನಿಯ; ಪೂರ್ವದಲ್ಲಿ ಉತ್ತರ ಕ್ಯಾರಲೈನ, ದಕ್ಷಿಣದಲ್ಲಿ ಜಾರ್ಜಿಯ, ಆಲಬಾಮ ಹಾಗೂ ಮಿಸಿಸಿಪಿ ರಾಜ್ಯ, ಪಶ್ಚಿಮದಲ್ಲಿ ಮಿಸಿಸಿಪಿ ನದಿ-ಇವು ಇದರ ಮೇರೆಗಳು. ಸ್ಥೂಲವಾಗಿ ಇದು ಉ.ಅ. 35°-36° 41' ಮತ್ತು ಪ.ರೇ. 81° 41'-90° 18' ನಡುವೆ ಇದೆ. ಪಶ್ಚಿಮದಿಂದ ಪೂರ್ವಕ್ಕೆ ರಾಜ್ಯದ ಗರಿಷ್ಠ ಉದ್ದ 432 ಮೈ. (695 ಕಿಮೀ.), ಗರಿಷ್ಟ ಅಗಲ 112 ಮೈ. (180 ಕಿಮೀ). ವಿಸ್ತೀರ್ಣ 42,244 ಚ.ಮೈ. (1,09,412 ಚ.ಕಿಮೀ.). ಇದರಲ್ಲಿ 482 ಚ.ಮೈ. ಜಲಾವೃತ. ವಿಸ್ತೀರ್ಣದಲ್ಲಿ ಇದು ಅಮೆರಿಕ ಸಂಯುಕ್ತ ಸಂಸ್ಥಾನಗಳ ಪೈಕಿ 34ನೆಯ ರಾಜ್ಯ. ಇದು ಅಮೆರಿಕ ಒಕ್ಕೂಟಕ್ಕೆ ಸೇರಿದ (1796ರ ಜೂನ್ 1) 16ನೆಯ ರಾಜ್ಯ. ಜನಸಂಖ್ಯೆ 39,24,164 (1970). ರಾಜಧಾನಿ ನ್ಯಾಷ್ ಮಿಲ್.

ಭೌತಲಕ್ಷಣ

[ಬದಲಾಯಿಸಿ]

ಇದನ್ನು ಪೂರ್ವ, ಮಧ್ಯ ಹಾಗೂ ಪಶ್ಚಿಮ ಟೆನಸೀ ಎಂಬ ಮೂರು ಭಾಗಗಳಾಗಿ ವಿಂಗಡಿಸುವ ವಾಡಿಕೆಯಿದೆ. ಉತ್ತರ ಕ್ಯಾರಲೈನ ಅಂಚಿನಲ್ಲಿರುವ ಅನೇಕ ಪರ್ವತಶ್ರೇಣಿಯಿಂದ ಕಂಬರ್ಲೆಂಡ್ ಪ್ರಸ್ಥಭೂಮಿಯ ಮೇಲಿನವರೆಗೂ ಪೂರ್ವ ಟೆನಸೀ ವ್ಯಾಪಿಸಿದೆ. ಕಂಬರ್ಲೆಂಡ್ ಪ್ರಸ್ಥಭೂಮಿಯ ಪಶ್ಚಿಮ ಭಾಗದಿಂದ ಟೆನಸೀ ನದಿಯ ವರೆಗಿನದು ಮಧ್ಯ ಟೆನಸೀ. ಟೆನಸೀ ನದಿಯಿಂದ ಮಿಸಿಸಿಪಿ ನದಿಯವರೆಗೆ ಪಶ್ಚಿಮ ಟೆನಸೀ ಹಬ್ಬಿದೆ. ಟೆನಸೀ ನದಿಯ ಪಶ್ಚಿಮಕ್ಕಿರುವ ಪ್ರಸ್ಥಭೂಮಿಯೂ ಮಿಸಿಸಿಪಿ ನದೀ ಬಯಲೂ ಇದರಲ್ಲಿ ಸೇರಿವೆ. ಉತ್ತರ ಕ್ಯಾರಲೈನ ರಾಜ್ಯದ ಗಡಿಯ ಬಳಿಯ ಕ್ಲಿಂಗ್ ಮನ್ಸ್ ಡೋಮ್ (6,643') ಟೆನಸೀ ರಾಜ್ಯದ ಅತ್ಯುನ್ನತ ಶಿಖರ. ಸವಿಯರ್ ಕೌಂಟಿಯಲ್ಲಿರುವ ಆ ಶಿಖರಪ್ರದೇಶದಿಂದ, ಷೆಲ್ಬಿ ಕೌಂಟಿಯಲ್ಲಿ ಮಿಸಿಸಿಪಿ ನದಿಯ ಬಯಲಿನ (182') ವರೆಗೆ ನೆಲ ಇಳಿಜಾರಾಗಿದೆ. ರಾಜ್ಯದ ಪೂರ್ವ ಗಡಿಯ ಉದ್ದಕ್ಕೆ 8 ಮೈ. ಅಗಲವಾಗಿ ಹಬ್ಬಿರುವ ಯುನಾಕ ಪರ್ವತದ ಅತ್ಯುನ್ನತ ಶಿಖರದ ಎತ್ತರ 6,285'. ಟೆನಸೀ ರಾಜ್ಯದಲ್ಲಿರುವ ಆಪಲೇಚಿಯನ್ ಕಣಿವೆಯ ಭಾಗಕ್ಕೆ ಪೂರ್ವ ಟೆನಸೀ ಕಣಿವೆಯೆಂದು ಹೆಸರು. ಟೆನಸೀ ಮಧ್ಯಬಾಗ ಬಹುತೇಕ ಸಮತಲ; ಕೆಲವು ಕಡೆಗಳಲ್ಲಿ ನದೀಕಣಿವೆಗಳಿವೆ. ಮರ್ ಫ್ರೀಸ್ ಬರೋ ಮತ್ತು ನ್ಯಾಷ್ ವಿಲ್ ನಗರಗಳು ಈ ಭಾಗದಲ್ಲಿವೆ. ಟೆನಸೀ ಮಧ್ಯ ಬಯಲಿಗೂ ತಳಗಣ ಟೆನಸೀ ನದಿಗೂ ನಡುವೆ ಪಶ್ಚಿಮ ಹೈಲೆಂಡ್ ಶ್ರೇಣಿಯಿದೆ. ಕೆಳಟೆನಸೀ ನದಿಯಿಂದ ಪಶ್ಚಿಮಕ್ಕೆ ನೆಲ ತೀವ್ರವಾಗಿ ಏರುತ್ತ ಸಾಗಿ ಅನಂತರ ಇಳಿಜಾರಾಗಿ ಮಿಸಿಸಿಪಿ ದಂಡೆಯ ಮೈದಾನದ ಬಳಿ ಥಟ್ಟನೆ ಇಳಿಯುತ್ತದೆ. ಈ ದಿಬ್ಬಕ್ಕೂ ಮಿಸಿಸಿಪಿಗೂ ನಡುವೆ ಜೌಗು ನೆಲವೂ ಹೊಂಡಗಳೂ ಇವೆ. ಉತ್ತರ ಭಾಗದಲ್ಲಿ ರೀಲ್ ಫುಟ್ ಸರೋವರವಿದೆ. 1811ರ ಭೂಕಂಪದಲ್ಲಿ ಸಂಭವಿಸಿದ ಭೂಕುಸಿತ ಪ್ರದೇಶದಲ್ಲಿರುವ ಈ ಸರೋವರದ ಉದ್ದ 18 ಮೈ.; ಅಗಲ 3 ಮೈ. ಟೆನಸೀಯ ಇತರ ಪ್ರಮುಖ ಸರೋವರಗಳು ವಾಟ್ಸ್, ಚಿಕಮಾಗ, ಡಗ್ಲಾಸ್ ಹಾಗೂ ಚೆರಕೀ. ಟೆನಸೀ ಮತ್ತು ಕಂಬ8ರ್ಲೆಂಡ್ ಇವು ಟೆನಸೀ ರಾಜ್ಯದ ಮುಖ್ಯ ನದಿಗಳು. ಇವುಗಳಿಗೆ ಹಲವು ಉಪನದಿಗಳಿವೆ.

ವಾಯುಗುಣ

[ಬದಲಾಯಿಸಿ]

ಬೇಸಗೆಯ ಮಾಧ್ಯ ಉಷ್ಣತೆ ಎತ್ತರಕ್ಕೆ ಅನುಗುಣವಾಗಿ ವ್ಯತ್ಯಾಸವಾಗುತ್ತದೆ. ಅನೇಕ ಪರ್ವತದ ಮೇಲೆ 62ಲಿ ಈ. (17ಲಿ ಅ); ಕಂಬರ್ಲೆಂಡ್ ಪ್ರಸ್ಥಭೂಮಿಯ ಮೇಲೆ 72ಲಿ ಈ. (20ಲಿ ಅ); ಟೆನಸೀ ನದಿಯ ಪೂರ್ವದ ಕಣಿವೆಯಲ್ಲಿ 75ಲಿ ಈ.; ಮಧ್ಯ ಕಣಿವೆಯಲ್ಲಿ 77ಲಿ ಈ. ಪಶ್ಚಿಮ ಟೆನಸೀಯ ಪೂರ್ವ ಗಲ್ಫ್ ಮೈದಾನದಲ್ಲಿ 78ಲಿ ಈ. ಈ ಪ್ರದೇಶಗಳ ಚಳಿಗಾಲದ ಮಾಧ್ಯ ಉಷ್ಠತೆ ಸಾಮಾನ್ಯವಾಗಿ 38ಲಿ ಈ. ವಾರ್ಷಿಕ ಮಾಧ್ಯ ಉಷ್ಣತೆ ಪೂರ್ವ ಟೆನಸೀಯದಲ್ಲಿ 57ಲಿ ಈ. ಮಧ್ಯ ಟೆನಸೀಯಲ್ಲಿ 58ಲಿ ಈ. ಪಶ್ಚಿಮ ಟೆನಸೀಯಲ್ಲಿ 60ಲಿ ಈ. ವಾರ್ಷಿಕ ಅವಪಾತ 50” (1,270 ಮಿಮೀ.). ಹಿಮಪಾತ 8". ದಕ್ಷಿಣ ಅಥವಾ ಆಗ್ನೇಯ ದಿಕ್ಕಿನಿಂದ ಬೀಸುವ ಬಿಸಿ ಮಾರುತಗಳು ಉತ್ತರದಿಂದ ಬೀಸುವ ಶೀತಮಾರುತಗಳೊಂದಿಗೆ ಸೇರಿ ಪಶ್ಚಿಮ ಅಥವಾ ಪೂರ್ವಾಭಿಮುಖ ಮಾರುತಗಳಾಗಿ ಮಾರ್ಪಡುತ್ತವೆ.

ಸಸ್ಯಪ್ರಾಣಿ ಜೀವನ

[ಬದಲಾಯಿಸಿ]

ಹಿಂದೆ ರಾಜ್ಯದ ಬಹುಭಾಗ ಅರಣ್ಯಾವೃತವಾಗಿತ್ತು. ಈಗ 10% ಭಾಗ ಮಾತ್ರ ಅರಣ್ಯಪ್ರದೇಶ. ಅರಣ್ಯಗಳಲ್ಲಿ ನೈಸರ್ಗಿಕವಾಗಿ ಬೆಳೆದ ಓಕ್, ಎಲ್ಮ್, ಬೀಚ್ ವೃಕ್ಷಗಳ ಈಗಲೂ ಇವೆ. ಸಿಕಮೋರ್, ಬ್ಯಾಸ್ ವುಡ್, ಚೆರಿ, ಹಿಕರಿ, ಲೋಕಸ್ಟ್, ಸ್ಟ್ರೂಸ್, ಪಾಪ್ಲರ್, ಮೇಪ್ ಲ್ ಮರಗಳು ರಾಜ್ಯದಲ್ಲೆಲ್ಲ ಸಾಮಾನ್ಯ. ಪೂರ್ವ ಟೆನಸೀಯಲ್ಲಿ ಹೆಮ್ಲಾಕ್, ಬಾಲ್ಸಂ, ಪೈನ್, ಸ್ಟ್ರಸ್ ಮರಗಳು ಯಥೇಚ್ಛವಾಗಿವೆ. ಪಶ್ಚಿಮದ ಜೌಗು ಪ್ರದೇಶದಲ್ಲಿ ಸೈಪ್ರೆಸ್, ಪೆಕನ್, ಟ್ಯೂಪೆಲೋ ಮುಂತಾದವು ಬೆಳೆಯುತ್ತವೆ. ರಾಜ್ಯದಲ್ಲಿ 150ಕ್ಕೂ ವೃಕ್ಷಪ್ರರೂಪಗಳಿವೆ.

ಪಾಶ್ಚಾತ್ಯರ ವಲಸೆ ಆರಂಭವಾದ ಕಾಲದಲ್ಲಿ ಕಡುಕೋಣ, ಎಲ್ಕ್ (ಕಡವೆ), ವರ್ಜಿನಿಯ ಜಿಂಕೆ, ಕಪ್ಪು ಕರಡಿ, ತೋಳ, ಚಿರತೆ, ಲಿಂಕ್ಲ್_ಈ ಪ್ರಾಣಿಗಳು ಹೆಚ್ಚಾಗಿದ್ದುವು. ಈಗ ವರ್ಜೆನಿಯ ಜಿಂಕೆ, ಕರಡಿ, ಲಿಂಕ್ಸ್ ಇವು ಪರ್ವತ ಹಾಗೂ ಅರಣ್ಯಭಾಗಗಳಲ್ಲಿವೆ. ತುಪ್ಪುಳು ಪ್ರಾಣಿಗಳು, ನರಿ, ಸ್ಕಂಕ್, ಒಪಾಸಂ, ರಕೂನ್, ಮಿಂಕ್, ಪುನುಗು ಇಲಿ, ಮೊಲ, ಅಳಿಲು, ವೀಸಲ್. ರಷ್ಯನ್ ಕಾಡಿಹಂದಿ ಪೂರ್ವ ಟಿನಸೀಯಲ್ಲಿ ವಿಶೇಷವಾಗಿವೆ. ಪಕ್ಷಿಗಳಲ್ಲಿ ಮುಖ್ಯವಾದವು ಪ್ಯಾಸೆಂಜರ್ ಪಾರಿವಾಳ, ಕ್ಯಾರಲೈನ ಗಿಳಿ, ಬಿಳಿಕೊಕ್ಕಿನ ಮರಕುಟಕ, ಪ್ರೇರಿ ಕುಕ್ಕುಟ. ಕೆಲವು ಬಗೆಯ ಡೇಗೆ ಹಾಗೂ ಹದ್ದುಗಳು ಕಂಬರ್ಲೆಂಡ್ ಪ್ರದೇಶದಲ್ಲೂ ಬಂಗಾರದ ಹದ್ದು ಆಪಲೇಚಿಯನ್ ಶ್ರೇಣಿಯ ಸ್ಮೋಕಿ ಪರ್ವತದಲ್ಲೂ ಇವೆ. ಜಲಚರ ಪಕ್ಷಿಗಳು ನೀಲಿಕೊಕ್ಕರೆ ಮತ್ತು ಹಸುರುಕೊಕ್ಕರೆ. ಬೇರೆಯ ಪಕ್ಷಿಗಳು ಕಾಡು ತುರ್ಕಿ ಕೋಳಿ, ಜೀವಂಜೀವ, ಗೌಸ್, ಕ್ವಿಲ್, ಬಾಬ್ ವೈಟ್, ಪಾರಿವಾಳ, ನದಿ, ತೊರೆಗಳಲ್ಲಿ ಸಿಗುವ ಮೀನುಗಳು ಕ್ಯಾಟ್‍ಫಿಷ್, ಹಂದಿಮೀನು, ಬಾಸ್, ಸ್ಯಾಲ್ ಮನ್ ಇತ್ಯಾದಿ. ಉರಗಗಳಲ್ಲಿ ಪ್ರಮುಖವಾದವು ಬುಡಬುಡಕೆಹಾವು, ಕಾಪರ್ ಹೆಡ್ ಮತ್ತು ಕಾಟನ್ ಮೌತ್. ರಾಜ್ಯದಲ್ಲಿ ಅನೇಕ ರಾಷ್ಟ್ರೀಯ ಉದ್ಯಾನಗಳೂ ಅಭಯಾರಣ್ಯಗಳೂ ಇವೆ. ಅವುಗಳಲ್ಲಿ ಅತ್ಯಂತ ದೊಡ್ಡದು ಪಶ್ಚಿಮ ಟೆನಸೀಯ ನಾಚeóï ಟ್ರೇಸ್ ರಾಜ್ಯ ಉದ್ಯಾನ (42,000 ಎ.; 17000 ಹೆ.)

ಜನಜೀವನ

[ಬದಲಾಯಿಸಿ]

ಚೆರಕೀ, ಕ್ರೀಕ್ಸ್ ಮೊದಲಾದ ರೆಡ್ ಇಂಡಿಯನರು ಟೆನಸೀಯ ಮೂಲನಿವಾಸಿಗಳು. ಕಾಲಕ್ರಮದಲ್ಲಿ ಫ್ರೆಂಚರು, ಇಂಗ್ಲಿಷರು ಹಾಗೂ ಇತರ ಯೂರೋಪಿಯನ್ ಜನರು ಇಲ್ಲಿ ನೆಲೆಸಿದರು. ಈಗಿನ ನೀಗ್ರೋ ಜನರು ಪೂರ್ವಿಕರು ಗುಲಾಮರಾಗಿ ಬಂದವರು. ಜನಸಾಂದ್ರತೆ ಚ.ಮೈ.ಗೆ 90. ಪ್ರಮುಖ ಜನಭರಿತ ನಗರಗಳು ಮೆಂಫಿಸ್ (6,23,530) (1970). ಚ್ಯಾಟನೂಗ (1,19,082), ನಾಕ್ಸ್ ವಿಲ್ (1,74,587), ನ್ಯಾಷ್‍ವಿಲ್ (4,47,877) ಹಾಗೂ ಜ್ಯಾಕ್‍ಸನ್ (39,996).

ಇಲ್ಲಿ ಕ್ರೈಸ್ತಧರ್ಮ ಪ್ರಧಾನವಾಗಿದೆ. ಜನರಲ್ಲಿ ಬ್ಯಾಪ್ಟಿಸ್ಟ್ ಪಂಥದವರ ಸಂಖ್ಯೆ ಅಧಿಕ. ಮೆತಾಡಿಸ್ಟ್ ಹಾಗೂ ನೀಗ್ರೋ ಬ್ಯಾಪ್ಟಿಸ್ಟ್ ಪಂಥದವರೂ ಇದ್ದಾರೆ. ನೀಗ್ರೋ-ಬಿಳಿಯರ ನಡುವೆ ವಿವಾಹನಿಷೇಧವನ್ನು ಸಂವಿಧಾನ ವಿರುದ್ಧವೆಂದು ಅಮೆರಿಕದ ಸುಪ್ರೀಂ ಕೋರ್ಟು ಘೋಷಿಸಿದೆ (ಜೂನ್ 1967).

ಇತಿಹಾಸ

[ಬದಲಾಯಿಸಿ]

ಯೂರೋಪಿನ ಜನ ನೆಲೆಸುವುದಕ್ಕೆ ಮುಂಚೆ ಚೆರಕೀ, ಕ್ರೀಕ್ಸ್ ಹಾಗೂ ಇತರ ಇಂಡಿಯನ್ ಜನ ಟಿನಸೀ ಪೂರ್ವ ಭಾಗದಲ್ಲಿ ಬೇಟೆಯಲ್ಲಿ ನಿರತರಾಗಿದ್ದರು. ನ್ಯೂ ಯಾರ್ಕ್ ಪ್ರದೇಶದ ಇರೊಕ್ವಾಯ್ ಇಂಡಿಯನರು ಮಧ್ಯ ಟೆನಸೀ ಪ್ರದೇಶದ ಮೇಲೆ ಸ್ವಾಮ್ಯ ಸ್ಥಾಪಿಸಿದರು. ಪಶ್ಚಿಮ ಭಾಗ ಚಿಕಸಾ ಇಂಡಿಯನರ ನೆಲೆಯಾಗಿತ್ತು.

ಟಿನಸೀ ಪ್ರದೇಶಕ್ಕೆ ಮೊತ್ತಮೊದಲು ಬಂದ ಐರೋಪ್ಯನೆಂದರೆ ಸ್ಪೇನಿನ ಡಿ ಸೋಟೋ (1540). ಅವನ ತರುವಾಯ 1673ರಲ್ಲಿ ಪಿಯರಿ ಮ್ಯಾರ್ಕೆಟ್ ಹಾಗೂ ಜೇಮ್ಸ್ ನೀಡೆಂ ಇವರೂ 1682ರಲ್ಲಿ ಲಾ ಸ್ಯಾಲನೂ (ಇವರೆಲ್ಲ ಫ್ರೆಂಚರು) ಈ ಭಾಗದಲ್ಲಿ ಸಂಚರಿಸಿದರು. 1682ರ ಹೊತ್ತಿಗೆ ಫ್ರೆಂಚರು ಹ್ಯಾಚೀ ನದಿಯ ಬಳಿ ಕೋಟಿಯೊಂದನ್ನು ಕಟ್ಟಿಕೊಂಡರು. 1714ರಲ್ಲಿ ನ್ಯಾಷ್ ವಿಲ್ ಎಂಬ ಫ್ರಾನ್ಸ್ ದೇಶಿಗ ಈಗಿನ ನ್ಯಾಷ್ ವಿಲ್ ಬಳಿ ವ್ಯಾಪಾರ ಠಾಣೆಯನ್ನು ಸ್ಥಾಪಿಸಿದ. ಇತರ ಫ್ರೆಂಚ್ ವ್ಯಾಪಾರಿಗಳು ಈಗಿನ ಮೆಂಫಿಸ್ ನಗರದ ನಿವೇಶನದ ಬಳಿ ಅಸಮ್ ಷನ್ ಕೋಟಿಯನ್ನು ಕಟ್ಟಿದರು. ವರ್ಜಿನಿಯದ ತಾಮಸ್ ವಾಕರ್ 1748-1750ರಲ್ಲಿ ಭೂವ್ಯಾಪಾರ ಸಂಸ್ಥೆಯೊಂದರ ಪರವಾಗಿ ಟೆನಸೀ ಪ್ರದೇಶವನ್ನು ಪರಿಶೋಧಿಸಿದ. ಫ್ರೆಂಚರ ಹಾಗೂ ರೆಡ್ ಇಂಡಿಯನ್ ಆದಿವಾಸಿಗಳ ವಿರುದ್ಧ ಇಂಗ್ಲೆಂಡಿನ ನೆಲಸಿಗರು ನಡೆಸಿದ ಯುದ್ಧದ ಕಾಲದಲ್ಲಿ (1757) ಇಂಗ್ಲಿಷರು ನಾಕ್ಸ್ ವಿಲ್ ನಿವೇಶನಕ್ಕೆ 30 ಮೈ. ದೂರದಲ್ಲಿ ಲೌಡೌನ್ ಕೋಟೆಯನ್ನು ಕಟ್ಟಿದರು. 1760ರಲ್ಲಿ ಚಿರಕೀ ಇಂಡಿಯನರು ಆ ಕೋಟೆಯನ್ನು ಆಕ್ರಮಿಸಿ ಅಲ್ಲಿಯ ಇಂಗ್ಲಿಷರನ್ನು ಕೊಲೆಮಾಡಿದರು. 1763ರಲ್ಲಿ ಯುದ್ಧ ಕೊನೆಗೊಂಡು ಇಂಗ್ಲೆಂಡಿಗೆ ಟೆನಸೀ ಪ್ರದೇಶದ ಮೇಲೆ ನಿರ್ವಿವಾದವಾದ ಪರಮಾಧಿಕಾರ ಲಭಿಸಿತು.

ಪ್ರಾರಂಭದಲ್ಲಿ ಟೆನಸೀ ಪ್ರದೇಶ ಫ್ರೆಂಚರಿಗೆ ಸೇರಿತ್ತು. ಅವರು 1763ರಲ್ಲಿ ತಮ್ಮ ಹಕ್ಕನ್ನು ಬ್ರಿಟಿಷರಿಗೆ ಬಿಟ್ಟುಕೊಟ್ಟರು. ಅದಕ್ಕೆ ಹಿಂದೆ 1760ರಲ್ಲಿ ಡೇನಿಯನ್ ಬೂನ್ ಮತ್ತು ಇತರ ಭೂಪರಿಶೋಧಕರು ಟೆನಸೀ ಪ್ರದೇಶಕ್ಕೆ ಬಂದು ಜನ ನೆಲಸುವ ಬಗ್ಗೆ ಪ್ರದೇಶ ಪರೀಕ್ಷೆ ನಡೆಸಿದ್ದರು. ತರುವಾಯ ಬೂನ್ಸ್ ಕ್ರೀಕ್ (1769). ಕಾತ್ಟರ್ ನದೆ (1771), ಮತ್ತು ನಾಲಿಚಕೀ ನದಿಗಳ ಅಂಚುಗಳಲ್ಲಿ ಜನ ನೆಲೆಸಿದರು. ಈ ವಸಾಹತುಗಳು ಜಾನ್ ಸಿವೀರ್ ಮತ್ತು ಜೇಮ್ಸ್ ರಾಬಟ್ ್ಸನನ ನಾಯಕತ್ವದಲ್ಲಿ ಏರ್ಪಟ್ಟು ಅವುಗಳಿಗೆ ವಟಾಗ ವಸಾಹತು ಪ್ರದೇಶ ಎಂಬ ಹೆಸರಾಯಿತು. ಅಲ್ಲಿಯ ಜನ ತಮ್ಮ ಸ್ವಯಮಾಡಳಿತದ ಬಗ್ಗೆ 1772ರಲ್ಲಿ ವಟಾಗ ಸಂಘವನ್ನು ಸ್ಥಾಪಿಸಿಕೊಂಡರು. ಅಮೆರಿಕದ ಸ್ವಾತಂತ್ರ್ಯಯುದ್ಧ ಪ್ರಾರಂಭವಾದಾಗ ವಟಾಗ ಜನರು ವಾಷಿಂಗ್ ಟನ್ ನ ಪರವಾಗಿ ಬ್ರಿಟಿಷರ ವಿರುದ್ಧ ಹೋರಾಟದಲ್ಲಿ ಸೇರಿದ್ದರು. 1776ರಲ್ಲಿ ಅದು ವಾಷಿಂಗ್ ಟನ್ ಜಿಲ್ಲೆ ಎನಿಸಿಕೊಂಡಿತು. 1776ರಲ್ಲಿ ಚಿರಕೀ ಇಂಡಿಯನರ ವಿರುದ್ಧ ನಡೆದ ಯುದ್ಧದಲ್ಲಿ ಅನೇಕ ನೆಲಸಿಗರು ಈ ಸ್ಥಳವನ್ನು ಬಿಟ್ಟು ಓಡಿದರು. ಕೊನೆಗೆ ಚೆರಕೀ ಇಂಡಿಯನರೊಂದಿಗೆ ಒಪ್ಪಂದವಾಯಿತು. ಸ್ವಾತಂತ್ತ್ಯ ಯುದ್ಧದಲ್ಲಿ ಟೆನಸೀ ಸ್ವಯಂಪ್ರೇರಿತ ಸೈನ್ಯ ಕಿಂಗ್ಸ್ ಮೌಂಟನ್ ಬಳಿ ಬ್ರಿಟಿಷರನ್ನು ಸೋಲಿಸಿತು (ಅಕ್ಟೋಬರ್ 7, 1780). ಈ ಸೋಲಿನಿಂದ ಬ್ರಿಟಿಷರ ದಕ್ಷಿಣದ ಯುದ್ಧಕಾರ್ಯಗಳಿಗೆ ಭಾರಿ ಪೆಟ್ಟು ಬಿತ್ತು.

ಉತ್ತರ ಕ್ಯಾರಲೈನ ತನ್ನ ಪಶ್ಚಿಮ ಪ್ರಾಂತ್ಯಗಳನ್ನು ಕೇಂದ್ರ ಸರ್ಕಾರಕ್ಕೆ ವಶಮಾಡಿದ ಮೇಲೆ (1784). ಅಭಿವೃದ್ಧಿಗೊಳ್ಳುತ್ತಿದ್ದ ಟೆನಸೀ ವಸಾಹತುಗಳಿಗೆ ಅಧಿಕೃತಿ ಆಡಳಿತ ವ್ಯವಸ್ಥೆ ತಪ್ಪಿತು. ಆಗ ಪಶ್ಚಿಮ ಟೆನಸೀ ನೆಲೆಸಿಗರು ರಾಜ್ಯಸ್ಥಾಪಿಸಿದರು. ಅದಕ್ಕೆ ಫ್ರಾಂಕ್ಲಿನ್ ರಾಜ್ಯವೆಂಬ ಹೆಸರಿತ್ತು. ಉತ್ತರ ಕ್ಯಾರಲೈನ ತನ್ನ ಪರಮಾಧಿಕಾರವನ್ನು ಪುನಃ ಘೋಷಿಸಿಕೊಳ್ಳುವವರೆಗೆ (1789) ಈ ವ್ಯವಸ್ಥೆ ಮುಂದುವರಿಯಿತು. ಮರುವರ್ಷ ಈ ಪ್ರದೇಶವನ್ನು ಕೇಂದ್ರಕ್ಕೆ ಒಪ್ಪಿಸಲಾಯಿತು. 1812ವರೆಗೆ ಟೆನಸೀ ರಾಜ್ಯಕ್ಕೆ ನಾಕ್ಸ್‍ವಿಲ್ ರಾಜಧಾನಿಯಾಯಿತು. ಮೊತ್ತಮೊದಲ ಟೆನಸೀ ವಿಧಾನಸಭೆ ಸೇರಿದ್ದು 1794ರಲ್ಲಿ. ಸಂವಿಧಾನ ಸಭೆ ಸೇರಿದ್ದು 1796ರಲ್ಲಿ. ಈ ರಾಜ್ಯ 1796ರ ಜೂನ್ ಅಮೆರಿಕ ಒಕ್ಕೂಟಕ್ಕೆ ಸೇರಿತು.

1812ರ ಯುದ್ಧದ ಸಮಯದಲ್ಲಿ ಟೆನಸೀ ಸೈನ್ಯ, ಆಂಡ್ರೂ ಜ್ಯಾಕ್ ಸನ್ ನಾಯಕತ್ವದಲ್ಲಿ ಕ್ರೀಕ್ಸ್ ಬಣದ ವಿರುದ್ಧ ನಡೆದ ಕದನದಲ್ಲಿ ಹಾಗೂ ಆರ್ಲಿಯನ್ಸ್ ಕದನದಲ್ಲಿ ಪ್ರನುಖ ಪಾತ್ರವಹಿಸಿತು. 1828ರಲ್ಲಿ ಜ್ಯಾಕ್ ಸನ್ ಅಮೆರಿಕದ ಅಧ್ಯಕ್ಷನಾದ. ಮೆಕ್ಸಿಕೋ ಮೇಲಣ ಯುದ್ಧಕ್ಕೆ ಕೋರಿದ್ದ ಸಂಖ್ಯೆಗಿಂತ ಹೆಚ್ಚಾಗಿ ಈ ರಾಜ್ಯ ಸೈನಿಕರನ್ನು ಕಳುಹಿಸಿ, ವಾಲಂಟಿಯರ್ ಸ್ಟೇಟ್ (ಸ್ವಯಂಪ್ರೇರಿತರ ರಾಜ್ಯ) ಎಂಬ ಹೆಸರು ಪಡೆಯಿತು.

ದಕ್ಷಿಣದ ರಾಜ್ಯಗಳು ಅಮೆರಿಕ ಒಕ್ಕೂಟದಿಂದ ಹೊರಬಂದಾಗ ಟೆನಸೀ ಈ ಕ್ರಮವನ್ನು ಪ್ರತಿಭಟಿಸಿತು (1861). ಸೈನಿಕರನ್ನು ಕಳುಹಿಸಲು ಆಬ್ರಹಾಂ ಲಿಂಕನ್ ಅಧ್ಯಾದೇಶವನ್ನು ಘೋಷಿಸಿದಾಗ ಟೆನಸೀ ರಾಜ್ಯವೂ ಒಕ್ಕೂಟದಿಂದ ಹೊರಬಂತು. ಅಂತರ್ಯುದ್ಧದ ಕಾಲದಲ್ಲಿ ಟೆನಸೀಯ ಅನೇಕ ಕಡೆ ಕದನಗಳು ನಡೆದುವು.

ಯುದ್ಧಾನಂತರ ರಾಜ್ಯದ ಸಂವಿಧಾನಕ್ಕೆ ತಿದ್ದುಪಡಿಗಳು ಹಾಗೂ ರಾಜ್ಯದ ಪುನರ್ರಚನೆಯ ಕಾರ್ಯಗಳು ಪ್ರಾರಂಭವಾದವು. ಗುಲಾಮ ಪದ್ಧತಿ ರದ್ದಾಗಿ ನೀಗ್ರೋಗಳಿಗೆ ನಾಕರಿಕ ಹಕ್ಕುಗಳು ದೊರೆತವು. ಟೆನಸೀ ಪುನಃ 1866ರ ಜುಲೈ 1ರಂದು ಒಕ್ಕೂಟಕ್ಕೆ ಸೇರಿತು.

ಶಿಕ್ಷಣ

[ಬದಲಾಯಿಸಿ]

ಪ್ರಾಥಮಿಕ ವಿದ್ಯಾಭ್ಯಾಸ ಕಡ್ಡಾಯ. 16 ವರ್ಷಕ್ಕೆ ಕೆಳಗಿನ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳಲಾಗದು. ರಾಜ್ಯದಲ್ಲಿ ಒಟ್ಟು ಏಳು ವಿಶ್ವವಿದ್ಯಾಲಯಗಳಿವೆ. ಅವುಗಳಲ್ಲಿ ಟೆನಸೀ ವಿಶ್ವವಿದ್ಯಾಲಯ (1794), ವಂಡರ್ ಬಿಲ್ಟ್ ವಿಶ್ವವಿದ್ಯಾಲಯ (1873), ವ್ಯವಸಾಯ ಹಾಗೂ ಕೈಗಾರಿಕಾ ವಿಶ್ವವಿದ್ಯಾಲಯ (1912), ಚ್ಯಾಟನೂಗ ವಿಶ್ವವಿದ್ಯಾಲಯ (1886) ಮುಖ್ಯವಾದವು.

ಆರ್ಥಿಕತೆ

[ಬದಲಾಯಿಸಿ]

ಟೆನಸೀಯ ಮುಖ್ಯ ಬೆಳೆಗಳು ಹೊಗೆಸೊಪ್ಪು, ಸೋಯಬೀನ್ಸ್, ಮೆಕ್ಕೆಜೋಳ, ಹತ್ತಿ, ಅರಣ್ಯಗಳಲ್ಲಿ ಚೌಬೀನೆಗೆ ಯೋಗ್ಯವಾದ ಗಟ್ಟಿಮರಗಳಿವೆ. ರಾಷ್ಟ್ರೀಯ ಅರಣ್ಯಗಳ ವಿಸ್ತೀರ್ಣ 6,01,000 ಎಕರೆ. ದನ, ಹಂದಿ, ಕೋಳಿಗಳನ್ನು ಅಧಿಕ ಸಂಖ್ಯೆಯಲ್ಲಿ ಸಾಕುತ್ತಾರೆ. ರಾಜ್ಯದಲ್ಲಿ ಅನೇಕ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳಿವೆ. ಮುಖ್ಯ ಉತ್ಪಾದನೆ ಸಿಮೆಂಟ್, ರಾಸಾಯನಿಕ ವಸ್ತುಗಳು, ಹತ್ತಿ ಹಾಗೂ ರೇಯಾನ್ ಬಟ್ಟೆಗಳು, ವಿದ್ಯುತ್ ಯಂತ್ರಗಳು, ಗಾಜಿನ ಸಾಮಾನುಗಳು. ರಾಜ್ಯದಲ್ಲಿ ಕಲ್ಲಿದ್ದಲು ಹಾಗೂ ಫಾಸ್ಫೇಟ್ ನಿಕ್ಷೇಪಗಳಿವೆ. ತವರ, ಜೇಡಿಮಣ್ಣು, ತಾಮ್ರ, ಅಭ್ರಕ ಮತ್ತು ಸುಣ್ಣಕಲ್ಲೂ ಸಿಗುತ್ತವೆ.

ರಾಜ್ಯದಲ್ಲಿ 3,500 ಮೈ. ರೈಲುಮಾರ್ಗಗಳೂ 74,500 ಮೈ. ಸಿಮೆಂಟ್ ಕಾನ್ ಕ್ರೀಟ್ ರಸ್ತೆಗಳೂ ಇವೆ. ಹೆದ್ದಾರಿಗಳ ಉದ್ದ 77,182 ಮೈ. 11 ಪ್ರಮುಖ ವಿಮಾನ ಮಾರ್ಗಗಳೂ 71 ವಿಮಾನ ನಿಲ್ದಾಣಗಳೂ ಇವೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಟೆನಸೀ&oldid=1085166" ಇಂದ ಪಡೆಯಲ್ಪಟ್ಟಿದೆ